ಮದುವೆ ಆಗದ ಮಗಳಿದ್ದರೆ ಹೆತ್ತವರ ಮನಕೆ ಹೊರೆ
ಬೇಗ ಕೈ ತೊಳೆಯುವಾಸೆ ಎರೆದು ಕೊಟ್ಟು ಧಾರೆ
ಹಸನಾಗಿರಬೇಕೆಂದು ತಮ್ಮ ಮಗಳ ಬಾಳು
ವರದಕ್ಷಿಣೆ ಹಣ ಕೊಡಲು ಪಡುವರದೆಷ್ಟು ಗೋಳು
ಹೊಲಗದ್ದೆಗಳ ಮಾರಿ ಕೂಲಿ ಮಾಡುವರು
ಮನೆ ಮಠಗಳ ಮಾರಿ ಆಗಿ ನಿರ್ಗತಿಕರು
ತಮ್ಮನ್ನೇ ತಾವಾಗಿ ಅಡವಿಟ್ಟು ಕೊಂಡರು
ಎಲ್ಲಾ ಕಷ್ಟಗಳ ನಗು-ನಗುತಾ ಸಹಿಸಿಕೊಂಡರು
ಹಣದ ಜೊತೆ ಬೇಡುವರು ಮೋಟಾರು ಗಾಡಿ
ಸ್ವತಹ ಖರೀದಿಸಲು ಇವರಿಗೇನು ದಾಡಿ ???
ಇವರಿಗೆ ಕೊಡಬೇಕಂತೆ ವಾಚು ಉಂಗುರ
ಯಾಕೆ ಬೇಕು ಭಂಢರಿಗೆ ಈ ಆಢ೦ಭರ ???
ದುಡಿಯಲಾಗದಿದ್ದರೂ ಇವರಿಗೆ ಬಿಡಿಗಾಸು
ಬೇಕಂತೆ ಕೈ ತುಂಬಾ ಸಂಬಳದ ಹೆಂಗಸು
ಇವರ ಮನದಲ್ಲಿದ್ದರೂ ಅದೆಷ್ಟೋ ಹೊಲಸು
ಅವಳಿಗಿರಬೇಕಂತೆ ಶುಚಿಯಾದ ಮನಸು
ಮದುವೆ ಆದ ಮೇಲೂ ನಿಲ್ಲದು ಬೇಡಿಕೆ
ಆಗೊಮ್ಮೆ ಈಗೊಮ್ಮೆ ಹೊಸ ಹೊಸ ಬೆದರಿಕೆ
ಇಂಥ ಅಧಮರಿಗೂ ಮದುವೆ ಬೇಕಾ ????
ಇವರ ಜನ್ಮಕಿಷ್ಟು ಬೆಂಕಿ ಹಾಕ.............
ಕಷ್ಟಗಳ ಸಹಿಸಿ ದೇಹ ಆಗಿದ್ದರೂ ಹುಣ್ಣು
ಮರ್ಯಾದೆಗೊಸ್ಕರ ಹೆಣಗಾಡುವಳು ಹೆಣ್ಣು
ಸೀಮೆಎಣ್ಣೆ ಸುರಿದು ಹಾಕುವರು ಕೊಂದು
ತೋರಿಸುವರು ಜಗಕೆ ಆತ್ಮಹತ್ಯೆ ಎಂದು
ಆಗಿಹುದು ಇದೂ ಒಂದು ಸಾಮಾಜಿಕ ಪಿಡುಗು
ಮುಳುಗುತಿದೆ ಮಹಿಳೆಯರ ಸಮಾನತೆಯ ಹಡಗು
ಮಹಿಳೆಯರೆ ನೀವೇ ಈ ಸಮಸ್ಯೆಯ ಬಿಡಿಸಿ
ವರದಕ್ಷಿಣೆಯ ಹೊರ ಹಾಕಿ ಕಸದಂತೆ ಗುಡಿಸಿ !!!!!