Sunday, February 21, 2010

ನನ್ನಾಕೆ

ಈ ಕವನ ನನ್ನ ಪ್ರೀತಿಯ ಪತ್ನಿಗೆ ಅರ್ಪಿತ.....I LOVE U VINU......


ಪ್ರೀತಿಯೆಂಬ ತೈಲವು ಬತ್ತಿ
ನಾ ಆರಿ ಹೋಗುತಿದ್ದೆ ದೀಪದಂತೆ
ನಿನ್ನ ಪ್ರೀತಿಯು ವರವಾಯ್ತು
ಮರುಭೂಮಿಯಲ್ಲಿ ಓಯಸ್ಸಿಸ್ಸಂತೆ


ಒಲವಿನ ಜಲವದು ಬತ್ತಿ
ಎಲೆ ಕಳಚಿಕೊಂಡಿದ್ದೆ ಮರದಂತೆ
ನೀ ಚಿಗುರಿಸಿದೆ ಬಾಳನ್ನು
ಮುಂಗಾರಿನ ಮಳೆಯಂತೆ




ಪ್ರೀತಿಯ ಆಧಾರವು ಉರುಳಿ
ನೆಲಕ್ಕೊರಗಿದ್ದೆ ಬಳ್ಳಿಯಂತೆ
ನೀ ನಿಂತೆ ಜೊತೆಯಲ್ಲಿ
ಒಂದು ಹೆಮ್ಮರದಂತೆ

ಸಾವಿನತ್ತ ಮುಖ ಮಾಡಿದ್ದೆ
ಜೀವನದಲ್ಲಿ ಜಿಗುಪ್ಸೆ ಗೊಂಡವನಂತೆ
ನೀ ಬಂದೆ ಬಾಳಲ್ಲಿ
ದಿವ್ಯ ಸಂಜೀವಿನಿಯಂತೆ








 

Friday, February 5, 2010

ನೀ ಮರಳಿ ಬಾ ............












ನನ್ನೇ ಕಾಯುತಿದ್ದ
ಆ ನಿನ್ನ ಕಂಗಳು
ಯಾರನ್ನೋ ಹುಡುಕುತಿವೆ
ಕಳೆದಿವೆ ಕೆಲ ತಿಂಗಳು

ನಾ ಚುಂಬಿಸಿದ್ದ
ಆ ನಿನ್ನ ತುಟಿಗಳು
ಮಧುವಿಲ್ಲದೆ ಒಣಗಿವೆ
ಹಳಸಿದಂತೆ ತಂಗಳು

ನಾ ಆಡುತಿದ್ದ
ಆ ನಿನ್ನ ಬೆರಳುಗಳು
ಯಾರನ್ನೋ ಹಿಡಿದಿವೆ
ಕಾಣದಂತೆ ಕೈಗಳು

ನೀ ಕೊಟ್ಟ ಆ ಮುತ್ತು
ಇನ್ನೂ ಹಸಿಯಾಗಿದೆ
ನೀನಾಡಿದ ಮಾತು
ಮಾತ್ರ ಹುಸಿಯಾಗಿದೆ

ನಿನ್ನನ್ನು ಮೆಚ್ಚಿಯೇ
ನಾ ಪ್ರೀತಿ ಮಾಡಿದೆ
ಏಕೆಂದು ತಿಳಿದಿಲ್ಲ
ನೀ ಮೋಸ ಮಾಡಿದೆ

ನನ್ನೆಲ್ಲಾ ಸುಖವನ್ನು
ನಿನ್ನಲ್ಲಿ ನೋಡಿದೆ
ನೀನೀಗ ಬೇರೆಯವರ
ಹಿಂದೆ ಹಿಂದೆ ಓಡಿದೆ

ಭಾವನೆಗಳು ಬತ್ತಿವೆ
ನನ್ನ ಬದುಕಿನಲ್ಲಿ
ಆದರೂ ಒಂದಾಸೆ
ಮನದ ಮೂಲೆಯಲ್ಲಿ

ಕೂಗಿ ಕರೆಯಲಾರೆ
ನನ್ನಲ್ಲಿ ದನಿಯಿಲ್ಲ
ನಾ ಕಾಯ ಬಲ್ಲೆನು
ಸಮಯದ ಮಿತಿಯಿಲ್ಲ

ಹೆಣ್ಣುಗಳು ಸಾಲಾಗಿ
ಕಾದಿಹರು ನನಗೆ
ಕಣ್ಣುಗಳು ಕಾಯುತಿವೆ
ನಿನ್ನ ಬರುವಿಕೆಗೆ ...

ಕಾದ ಹೆಂಚಿನ ಮೇಲೆ
ನೀರ ಹನಿ ಉಳಿಯೊಲ್ಲ
ನಿನ್ನನ್ನು ನಾ ಬಿಟ್ಟು
ಬಹುಕಾಲ ಬದುಕೊಲ್ಲ

Thursday, February 4, 2010

ವರದಕ್ಷಿಣೆ


ಮದುವೆ ಆಗದ ಮಗಳಿದ್ದರೆ ಹೆತ್ತವರ ಮನಕೆ ಹೊರೆ
ಬೇಗ ಕೈ ತೊಳೆಯುವಾಸೆ ಎರೆದು ಕೊಟ್ಟು ಧಾರೆ
ಹಸನಾಗಿರಬೇಕೆಂದು ತಮ್ಮ ಮಗಳ ಬಾಳು
ವರದಕ್ಷಿಣೆ ಹಣ ಕೊಡಲು ಪಡುವರದೆಷ್ಟು ಗೋಳು

ಹೊಲಗದ್ದೆಗಳ ಮಾರಿ ಕೂಲಿ ಮಾಡುವರು
ಮನೆ ಮಠಗಳ ಮಾರಿ ಆಗಿ ನಿರ್ಗತಿಕರು
ತಮ್ಮನ್ನೇ ತಾವಾಗಿ ಅಡವಿಟ್ಟು ಕೊಂಡರು
ಎಲ್ಲಾ ಕಷ್ಟಗಳ ನಗು-ನಗುತಾ ಸಹಿಸಿಕೊಂಡರು

ಹಣದ ಜೊತೆ ಬೇಡುವರು ಮೋಟಾರು ಗಾಡಿ
ಸ್ವತಹ ಖರೀದಿಸಲು ಇವರಿಗೇನು ದಾಡಿ ???
ಇವರಿಗೆ ಕೊಡಬೇಕಂತೆ ವಾಚು ಉಂಗುರ
ಯಾಕೆ ಬೇಕು ಭಂಢರಿಗೆ ಈ ಆಢ೦ಭರ ???

ದುಡಿಯಲಾಗದಿದ್ದರೂ ಇವರಿಗೆ ಬಿಡಿಗಾಸು
ಬೇಕಂತೆ ಕೈ ತುಂಬಾ ಸಂಬಳದ ಹೆಂಗಸು
ಇವರ ಮನದಲ್ಲಿದ್ದರೂ ಅದೆಷ್ಟೋ ಹೊಲಸು
ಅವಳಿಗಿರಬೇಕಂತೆ ಶುಚಿಯಾದ ಮನಸು

ಮದುವೆ ಆದ ಮೇಲೂ ನಿಲ್ಲದು ಬೇಡಿಕೆ
ಆಗೊಮ್ಮೆ ಈಗೊಮ್ಮೆ ಹೊಸ ಹೊಸ ಬೆದರಿಕೆ
ಇಂಥ ಅಧಮರಿಗೂ ಮದುವೆ ಬೇಕಾ ????
ಇವರ ಜನ್ಮಕಿಷ್ಟು ಬೆಂಕಿ ಹಾಕ.............

ಕಷ್ಟಗಳ ಸಹಿಸಿ ದೇಹ ಆಗಿದ್ದರೂ ಹುಣ್ಣು
ಮರ್ಯಾದೆಗೊಸ್ಕರ ಹೆಣಗಾಡುವಳು ಹೆಣ್ಣು
ಸೀಮೆಎಣ್ಣೆ ಸುರಿದು ಹಾಕುವರು ಕೊಂದು
ತೋರಿಸುವರು ಜಗಕೆ ಆತ್ಮಹತ್ಯೆ ಎಂದು

ಆಗಿಹುದು ಇದೂ ಒಂದು ಸಾಮಾಜಿಕ ಪಿಡುಗು
ಮುಳುಗುತಿದೆ ಮಹಿಳೆಯರ ಸಮಾನತೆಯ ಹಡಗು
ಮಹಿಳೆಯರೆ ನೀವೇ ಈ ಸಮಸ್ಯೆಯ ಬಿಡಿಸಿ
ವರದಕ್ಷಿಣೆಯ ಹೊರ ಹಾಕಿ ಕಸದಂತೆ ಗುಡಿಸಿ !!!!!

Tuesday, February 2, 2010

ದಲಿತನ ಸ್ನೇಹ



ಇದೊಂದು ಕವನವಲ್ಲ....ನಿಜ ಕಥೆ.....ಕೋಲ್ಕತ್ತಾ ದಲ್ಲಿದ್ದ ನನ್ನ ದಲಿತ ಸ್ನೇಹಿತನೊಬ್ಬನ ನೋವಿನ ಕಥೆ...ಉಚ್ಹ ಜಾತಿಯವರ ಮನೆಯಲ್ಲಿ ಆತನ ಅಮ್ಮ ಮನೆ ಕೆಲಸ ಮಾಡಿ ಕೊಂಡಿದ್ದರು...ಅವರ ಮನೆಯ ಕೊಟ್ಟಿಗೆ ಯಲ್ಲಿ ಇವರ ವಾಸ...ಆ ಮನೆಯ ಯಜಮಾನನ ಮಗಳು ಈತನ ಸ್ನೇಹಿತೆ.........




ಜೊತೆಯಲ್ಲಿ ಕೂಡಿ-ಆಡಿ ಬೆಳೆದವರು ನಾವು
ಜೊತೆಯಲ್ಲಿ ದಿನ-ರಾತ್ರಿ ಕಳೆದವರು ನಾವು
ಜೊತೆಯಲ್ಲಿ ಕಷ್ಟ-ಸುಖ ಕಂಡವರು ನಾವು
ಜೊತೆಯಿಲ್ಲಾ ನಾವಿಂದು ಎನ್ನುವುದೇ ನೋವು !!!!.

ಕಲ್ಮಶವಿಲ್ಲದೇ ಪವಿತ್ರ-ವಾಗಿತ್ತು ಸ್ನೇಹ
ಉಸಿರೊಂದು ಆಗಿ ಎರಡಾಗಿತ್ತು ದೇಹ
ಅಲ್ಲಿ ಇರಲಿಲ್ಲ ಪ್ರೇಮ-ಕಾಮಗಳ ವ್ಯಾಮೋಹ
ಆದರೂ ಬಂದಿತ್ತು ಕೆಟ್ಟ ಜನಕೆ ಸಂದೇಹ !!!!!

ಆಕೆಯೋ ಆಗರ್ಭ ಶ್ರೀಮಂತರ ಮಗಳು
ನಾ-ನಿಂತೆ ಕಡು ಬಡವ, ಜಾತಿಯಲಿ ಕೀಳು
ಅಸಹ್ಯ ಪಡುವರು ಅವರು ಕಂಡರೂ ನನ್ನ ನೆರಳು
ಹೇಳಿದರು ನನಗಂದು 'ಊರು ಬಿಟ್ಟು ತೆರಳು' !!!!!

 ಮನಸಲ್ಲಿ ಯಾವುದೋ ನಿರ್ಧಾರವ ತೊಟ್ಟು
ಹೋಗಿಲ್ಲ ನಾನು ಊರನ್ನು ಬಿಟ್ಟು
ನನ್ನ ನಡೆ ಅವ್ರಿಗೆ ತರಿಸಿತ್ತು ಸಿಟ್ಟು
ಕೈ ಕಾಲು ಮುರಿಸಿದರು ರೌಡಿಗಳ ಬಿಟ್ಟು !!!!!

ಗೆಳೆತನಕೆ ಉಂಟೆ ಹೆಣ್ಣು- ಗಂಡಿನ ಭೇಧ ??
ಗೆಳೆತನಕೆ ಉಂಟೆ ಮೇಲು- ಕೀಳಿನ ವಾದ ?
ಅಂತರವು ಎಲ್ಲುಂಟು ಬಡವನೋ-ಬಲ್ಲಿದ ?
ಎಲ್ಲಿ ಮಾಡಲಿ ನಾನು ನಿಜ ಸ್ನೇಹದ ಶೋಧ ???