Thursday, September 9, 2010

ನೋವು ಬೆಳಕಾಗಬೇಕು

ಎಂಜಲೆಲೆಗಳನ್ನು ಬೀದಿಗೆಸೆದಾಗ ಹಲವಾರು ನಾಯಿಗಳು ಮುತ್ತಿಕೊಳ್ಳುತ್ತವೆ. ಬಲಿಷ್ಠ ನಾಯಿಯು ದುರ್ಬಲ ನಾಯಿಗಳನ್ನು ಕಚ್ಚಿ ಓಡಿಸುತ್ತದೆ. ಒಂದುವೇಳೆ ಎಲ್ಲ ನಾಯಿಗಳು ಸಮಬಲವಾಗಿದ್ದರೆ ಹೋರಾಟಕ್ಕಿಳಿಯುತ್ತವೆ.ಬೆಳೆದ ನಾಯಿಗಳ ಮಧ್ಯೆ ಕೃಶವಾಗಿರುವ ಮರಿನಾಯಿಯ ಪಾಡಂತೂ ಹೇಳತೀರದು. ಎಲ್ಲ ನಾಯಿಗಳಿಂದ ಕಚ್ಚಿಸಿಕೊಂಡು ಓಡಿಹೋಗಿ ಬೀದಿಯ ಒಂದು ಬದಿಯಲ್ಲಿ ಕುಳಿತುಕೊಳ್ಳುತ್ತದೆ. ಎಲ್ಲ ನಾಯಿಗಳು ಎಂಜಲೆಲೆಯನ್ನು ನೆಕ್ಕಿ ಹೊರಟುಹೋದ ಮೇಲೆ ಈ ನಾಯಿಮರಿ ಅಳುಕಿನಿಂದ ಮೆಲ್ಲ ಮೆಲ್ಲನೆ ಹೆಜ್ಜೆಯಿಡುತ್ತ ಎಂಜಲೆಲೆ ರಾಶಿ ಹತ್ತಿರ ಹೋಗುತ್ತದೆ. ಆದರೆ ಅಲ್ಲೇನಿದೆ?? ಬರಿ ಎಲೆ ಮಾತ್ರ. ಒಂದು ಅಗುಳೂ ಇಲ್ಲ. ಆದರೂ ಆ ಎಲೆಗಳನ್ನು ನೆಕ್ಕಿ ತೃಪ್ತಿಪಡುತ್ತದೆ. ಇದು ಒಂದುದಿನದ ಕಥೆಯಲ್ಲ. ದಿನ ದಿನವೂ ಅನುಭವಿಸುವ ಗೋಳು. ಹೀಗೆಯೇ ಕೆಲವು ದಿನ ಕಳೆಯುತ್ತದೆ. ಮರಿನಾಯಿ ಬೆಳೆದು ಬಲಿಷ್ಠವಾಗುತ್ತದೆ. ಮುಂಚೆ ಬಲಶಾಲಿಯಾಗಿದ್ದ ನಾಯಿಗಳು ದುರ್ಬಲವಾಗುತ್ತವೆ.ಈಗ ಈ ನಾಯಿಯ ಪ್ರಭುತ್ವ. ಮುದಿನಾಯಿಗಳನ್ನು ಕಚ್ಚಿ ಓಡಿಸುತ್ತದೆ. ಮರಿನಾಯಿಗಳನ್ನು ಹತ್ತಿರ ಸೇರಿಸುವುದೇ ಇಲ್ಲ. ಹಿಂದೊಮ್ಮೆ ತಾನು ಮರಿಯಾಗಿದ್ದಾಗ ಪಟ್ಟ ಬವಣೆಗಳನ್ನು ಅದು ನೆನೆಯುವುದೇ ಇಲ್ಲ. ತನ್ನ ಈ ಪ್ರಾಯ, ಸಾಮರ್ಥ್ಯ ಶಾಶ್ವತವೆಂದೇ ತಿಳಿದು ಕ್ರೂರವಾಗಿ ವರ್ತಿಸುತ್ತದೆ. ಪ್ರಾಣಿ ಪ್ರಪಂಚದಲ್ಲಿ ಇದು ಸಾಮಾನ್ಯ. ಅಲ್ಲಿ ತಪ್ಪು ಒಪ್ಪುಗಳ ಚಿಂತನೆಗೆ ಸ್ಥಳವಿಲ್ಲ.ಪ್ರಾಣಿಗಳಿಗೆ ನ್ಯಾಯ,ನೀತಿ, ಧರ್ಮಗಳ ಸೂತ್ರಗಳು ಅನ್ವಯಿಸುವುದಿಲ್ಲ.
ಇದೆ ಮಾತನ್ನು ನಾವು ಮನುಕುಲದ ಬೇಗೆಗೆ ಹೇಳಲು ಸಾಧ್ಯವಿಲ್ಲ ಏಕೆಂದರೆ ಮಾನವ ಬ್ರಹ್ಮನ ಸರ್ವ ಶ್ರೇಷ್ಠ ಸೃಷ್ಟಿ. ಪ್ರಕೃತಿಯಿಂದ ಸಂಸ್ಕೃತಿಯೆಡೆಗೆ ಸಾಗುತ್ತಿರುವ ವಿಕಾಸ ಜೀವಿ. ಹೀಗೆ ಹೇಳಿಕೊಂಡು ನಮ್ಮ ಭುಜಗಳನ್ನು ತಟ್ಟಿಕೊಳ್ಳಬಹುದು. ಆದರೆ ನಿಜಸ್ಥಿತಿ ಬೇರೆಯೇ ಇದೆ. ನಮ್ಮ ವರ್ತನೆ ಹಲವಾರು ಸಂದರ್ಭಗಳಲ್ಲಿ ನಾಯಿಯ ನಡತೆಗಿಂತ ಹೀನವಾಗಿರುತ್ತದೆ.ಸೊಸೆಯಾಗಿದ್ದಾಗ ಕಣ್ಣೀರಲ್ಲಿ ಕೈ ತೊಳೆಯುವ ಹೆಣ್ಣು ಅತ್ತೆಯ ಪಟ್ಟಕ್ಕೆ ಬಂದಾಗ ತನ್ನ ಸೊಸೆಗೆ ಇಲ್ಲದ ಕಿರುಕುಳ ಕೊಡುತ್ತಾಳೆ. ಶೂದ್ರಾತಿ ಶೂದ್ರನಾಗಿದ್ದವನು ಇನ್ನೊಂದು ಜಾತಿಗೆ ಮತಾಂತರಗೊಂಡಾಗ ತಾನು ಬಿಟ್ಟು ಬಂದ ಜಾತಿಯವರನ್ನು ಹೀಯಾಳಿಸುತ್ತಾನೆ. ಚುನಾವಣೆಗಳಲ್ಲಿ ಸೋತು ಕೊರಗಿಹೊಗಿದ್ದ ವ್ಯಕ್ತಿಯೊಬ್ಬನು ಅದೃಷ್ಟವಶದಿಂದ ಪಟ್ಟಕ್ಕೆ ಬಂದಾಗ ಸೋತ ಅಭ್ಯರ್ಥಿಯೆದುರು ಮೀಸೆ ತಿರುವುತ್ತಾನೆ.
 
ದಿನ ದಿನವೂ ಹೊಡೆತ ಬಡಿತದಲ್ಲೇ ಕಾಲ ನೂಕಿದ ಬಾಲಕಾರ್ಮಿಕರು ತಾವು ಬೆಳೆದು ದೊಡ್ಡವರಾದ ಮೇಲೆ ಬಾಲ ಕಾರ್ಮಿಕರನ್ನು ದಂಡಿಸುತ್ತಾರೆ. ಗುಲಾಮನು ಒಡೆಯನಾದ ಮೇಲೆ ಇತರರನ್ನು ಗುಲಾಮನಂತೆ ಕಾಣುತ್ತಾನೆ. ಕುರುಡನಿಗೆ ಪಟ್ಟ ಕಟ್ಟಿದರೆ ಅವನು ಇತರರ ಕಣ್ಣು ಕೀಳಿಸುತ್ತಾನೆ. ನಾವು ಏಕೆ ಹೀಗೆ ಮಾಡುತ್ತೇವೆ? ಇದಕ್ಕೆ ಏನು ಕಾರಣ? ನಾವು ಹಿಂದೆ ಅನುಭವಿಸಿದ ಕಷ್ಟಗಳೇ ಮುಂದೆ ಸೇಡಾಗಿ ರೂಪುಗೊಳ್ಳುವುದೇ ಇದಕ್ಕೆ ಕಾರಣ. ಇದು ತಪ್ಪು. ನಾವು ಪಟ್ಟ ಕಷ್ಟಗಳಿಂದ ನಮ್ಮ ಹೃದಯ ಪಕ್ವವಾಗಬೇಕು., ಮೃದುವಾಗಬೇಕು, ಮಾಗಿದ ಹಣ್ಣಾಗಬೇಕು. ಆಗ ನಾವುಂಡ ನೋವು ನಮಗೆ ಬೆಳಕಾಗುತ್ತದೆ. ಈ ಬೆಳೆಕಿನಿಂದ ಇತರರ ಬದುಕನ್ನು ಬೆಳಗಿಸಬಹುದು. ಇಲ್ಲದಿದ್ದರೆ ನಾವು ನಾಯಿಗಿಂತ ಕಡೆ.