ಚಮಚೆಯನ್ನೋ, ಚೂರಿಯನ್ನೋ ಅಥವಾ ಇನ್ನೇನಾದ್ರು ಕೈಗೆ ಸಿಕ್ಕಿದ್ದನ್ನು ತೆಗೆದುಕೊಂಡು ಗೋಡೆಯ ಪೇಯಿಂಟ್ ತೆಗೆಯೋದು, ಒಳಗೆ ಇರೋ ಸಿಮೆಂಟು ಕಾಣಿಸೋ ವರೆಗೆ ಕೆರೆಯುತ್ತಾ ಹೋಗೋದು ನನ್ನ ಮೂರು ವರ್ಷದ ಮಗಳು 'ಕುಶಿ' ಮಾಡುವ ಅತೀ ಮುಖ್ಯ ದಿನಚರಿಗಳಲ್ಲಿ ಒಂದು. ಹಾಲ್ ಮತ್ತೆ ಅಡಿಗೆ ಮನೆಯ ಕೋಣೆಗಳು ಈವಾಗಲೇ ಆಕೆಯ ಈ ಕುಶಲ ಕಲೆಗಳಿಂದ ಅರೆ ನಗ್ನವಾಗಿದ್ದರೆ ಬೆಡ್ ರೂಂ ನ ಕೋಣೆಗಳು ಮಾತ್ರ ನಮ್ಮನ್ನು ಮುಟ್ಟೋರು ಯಾರು ಇಲ್ಲವೆಂದು ನಿರಾಳವಾಗಿದ್ದವು. ಬೆಡ್ ರೂಂ ನ ಕೋಣೆಗಳ ನಿರಾಳತೆಗೆ ಭಂಗ ಬರುವಂತೆ ಮೊನ್ನೆ ನಾನು ನನ್ನ ಮಗಳನ್ನು ಕುರಿತು 'ಚಿನ್ನು, ಈ ಗೋಡೆ ನ ಮುಟ್ಟೋಕೆ ಹೋಗಬೇಡ, ಅದರೊಳಗೆ 'ರಾ ಒನ್' ಇದ್ದಾನೆ ಅಂತ ಹೇಳಿದೆ....'ರಾ ಒನ್ ' ಸಿನೆಮಾ ನೋಡಲು ನಮ್ಮ ಪುಟಾಣಿ ಕುಶಿ ನ ಟಾಕೀಸ್ ಗೆ ಕರ್ಕೊಂಡು ಹೋಗಿದ್ದಾಗ ಸಿನೆಮಾ ಹಾಲ್ ನಲ್ಲಿ ಗಟ್ಟಿಯಾಗಿ ಬರುವ ಶಬ್ಧ ಹಾಗೂ ಸಿನೆಮಾದ ದೃಶ್ಯ ಗಳಲ್ಲಿನ ಭೀಕರತೆ ಗೆ ಆಕೆ ಹೆದರಿಕೊಂಡಿದ್ದು ನಾವು ಅರ್ಧ ದಲ್ಲೇ ಸಿನೆಮಾ ಮುಗಿಸಿ ಬರುವಂತೆ ಮಾಡಿತ್ತು. ಅಲ್ಲಿಂದ ಮುಂದೆ ಅವಳಿಗೆ ಊಟ ಮಾಡಿಸುವಾಗ, ಹಾಲು ಕುಡಿಸುವಾಗ , ತಿನ್ನು/ ಕುಡಿ ಇಲ್ಲಾ ಅಂದ್ರೆ ರಾ ಒನ್ ಬರ್ತಾನೆ ಅಂತ ಹೆದರಿಸೋದು common ಆಗಿಬಿಟ್ಟಿತ್ತು. ಅದ್ಕೆ 'ಗೋಡೆನಲ್ಲೂ ರಾ-ಒನ್ ಇದ್ದಾನೆ ಅಂತ ಹೆದರಿಸಿದ್ದೆ. ಅಲ್ಲಿವರೆಗೆ ಆ ಗೋಡೆಗಳ ತಂಟೆಗೆ ಹೋಗದೆ ತನ್ನಷ್ಟಕ್ಕೆ ಆತ ಆಡಿಕೊಳ್ಳುತಿದ್ದ ನಮ್ಮ ಕಂದಮ್ಮನಿಗೆ ನಾನು ಹಾಗೆ ಬೆದರಿಸಿದ್ದು ಪ್ರೇರಣೆ ಕೊಡ ಬೇಕೇ??? ನಾನು ಮನೆಯಲ್ಲಿ ಇಲ್ಲದೆ ಇರೋ ಹೊತ್ತಿಗೆ, ಅಮ್ಮ ಅಡಿಗೆಮನೆಯಲ್ಲಿ ಗ್ಯಾಸ್ ಮುಂದೆ ತಲ್ಲೀನವಾಗಿರುವ ಸಮಯ ನೋಡಿಕೊಂಡು ತನ್ನ ಕೈ- ಚಳಕ ತೋರಿಸಲು ಶುರು ಹತ್ತಿಕೊಂಡಳು......ಗೋಡೆಯಲ್ಲಿ ೨-೩ ಕಡೆ ತೂತು ಮಾಡಿ ಅಡಿಗೆ ಮನೆಯೊಳಗಿರುವ ಇರುವ ಅಮ್ಮನನ್ನು ಕರೆದು ತನ್ನ ತೊದಲು ನುಡಿಗಳಲ್ಲಿ 'ಅಮ್ಮ ಅಮ್ಮ, ರಾ -ಒನ್ ಇಲ್ಲ ಇಲ್ಲಿ ,ನೋಡಮ್ಮ ' ಎನ್ನುವುದೇ !!!!!
ಅಂದ್ರೆ ಮಕ್ಕಳು ಏನಾದ್ರೂ ಮಾಡ್ಬೇಡ ಅನ್ನೋದನ್ನು ಮಾಡೋದು ಜಾಸ್ತಿ .....ಅವ್ರಿಗೆ ಅದೊಂದು ಖುಷಿ.....ಏನು ಮಾಡುತಿದ್ದೀವಿ ಎನ್ನುವುದರ ಅರಿವು ಇಲ್ಲದ, ಮುಗ್ಧ ಮನಸ್ಸಿನ ಮಕ್ಕಳು ಹೀಗೆಲ್ಲಾ ಮಾಡೋದು ಅಪರಾಧವೇನೂ ಅಲ್ಲ ಬಿಡಿ......ಆದರೆ ದೊಡ್ಡವರಾದ ಮೇಲು ಅದನ್ನೇ ಮುಂದುವರಿಸಿದರೆ ಅದು ಖಂಡಿತಾ ಚೆನ್ನಾಗಿರೊಲ್ಲ ಅನ್ನುವುದು ನನ್ನ ಅಭಿಪ್ರಾಯ.
ನಾವು ಸಮಾಜ ಜೀವಿಗಳು. ಒಬ್ಬರ ಹಿತಾಸಕ್ತಿಗಳು ಇನ್ನೊಬ್ಬರ ಹಿತಾಸಕ್ತಿಗಳಿಗೆ ಅಡ್ಡ ಬರುವ ಸಾಧ್ಯತೆ ಇದ್ದೇ ಇರುತ್ತದೆ. ಒಟ್ಟಿಗೆ ಬೆಳೆದು ಬಾಳುವಾಗ ನಮ್ಮ ನಮ್ಮಲ್ಲೇ ಘರ್ಷಣೆ ಆಗುವ ಸಂಭವಗಳು ಇವೆ. ಹೀಗೆ ನಮ್ಮ ನಮ್ಮಲ್ಲೇ ಆಗುವ ಘರ್ಷಣೆಗಳನ್ನು ತಡೆಯುವ ಸಲುವಾಗಿ ಸಮಾಜದಲ್ಲಿ ನಾವು ಕೆಲವು ಸೂತ್ರಗಳನ್ನು ರೂಪಿಸಿಕೊಂಡಿದ್ದೇವೆ. ಜನರು ಹದ್ದು ಮೀರಿ ವರ್ತಿಸದಂತೆ ಅಡೆತಡೆಗಳನ್ನು ಹಾಕಲಾಯಿತು. ಸಮಾಜವು ಬೆಳೆದಂತೆ, ಜನ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಂತೆ ಈ ಸೂತ್ರಗಳು ಸಾಲವು ಎನ್ನೋ ಅಭಿಪ್ರಾಯ ಮೂಡಿತು. ಆಗ ಸರಕಾರ ಮುಂದೆ ಬಂದು ಜನತೆಯ ಚಟುವಟಿಕೆಗಳಿಗೆ ಇತಿಮಿತಿಯನ್ನು ನಿರ್ಮಿಸಿತು. ಅಷ್ಟೇ ಅಲ್ಲದೆ ಈ ಇತಿಮಿತಿಗಳನ್ನು ಮೀರಿ ನಡೆದವರಿಗೆ ಶಿಕ್ಷೆಯನ್ನು ವಿಧಿಸಿತು.
ಮನುಷ್ಯನ ಸ್ವಭಾವ ವಿಚಿತ್ರವಾದುದು. ಸಮಾಜ ರೂಪಿಸಿದ ಸೂತ್ರಗಳನ್ನು ಮುರಿಯುವುದರಲ್ಲೇ ಸಂತೋಷ ಪಡುತ್ತಾನೆ. ಸರಕಾರದ ಗೆರೆಗಳನ್ನು ದಾಟಿ ಸುಖಿಸುತ್ತಾನೆ. ನಿಷೇಧಿಸಲಾದ ವಸ್ತುಗಳನ್ನೇ ಪಡೆಯಲು ಹಾತೊರೆಯುತ್ತಾನೆ. ಹೋಗ ಬಾರದು ಎನ್ನುವ ಮಾರ್ಗದಲ್ಲೇ ಹೋಗಲು ಇಷ್ಟ ಪಡುತ್ತಾನೆ. ಇದರಿಂದ ಅವನಿಗೂ ಕೇಡು, ನೆರೆಹೊರೆಯರಿಗೂ ಕೇಡು ಎಂಬುದನ್ನು ಮರೆತು ಬಿಡುತ್ತಾನೆ.
ಕಳ್ಳತನ ,ಮೋಸ, ಹಿಂಸೆ ಮಾಡಬಾರದು, ಪರಸ್ತ್ರೀಯನ್ನು ಬಯಸಬಾರದು ಇವೆ ಮೊದಲಾದ ನಿಷೇಧಗಳನ್ನು ಎಲ್ಲಾ ಧರ್ಮಗಳೂ ಸಾರಿವೆ. ಆದರೆ ನಾವೆಲ್ಲಾ ಇದಕ್ಕೆ ವಿರುದ್ಧವಾಗಿಯೇ ನಡೆದುಕೊಳ್ಳುತ್ತೇವೆ. ನಮ್ಮ ಮನೆ ಹಿತ್ತಲಲ್ಲಿರುವುದಕ್ಕಿಂತ ಬೇರೆಯವರ ತೋಟದ ಹಣ್ಣು ಹಂಪಲುಗಳೇ ನಮ್ಮ ಬಾಯಿಗೆ ರುಚಿ ಎನಿಸುವುದು, ಸ್ವಂತ ಹೆಂಡತಿ ಎಷ್ಟೇ ರೂಪವತಿ ಆಗಿದ್ದರೂ ಪರರ ಹೆಂಡತಿಯೇ ಅತೀ ರೂಪಸಿಯಾಗಿ ಕಾಣಿಸುವಳು. ಒಲುಮೆಯಿಂದಲೋ, ಬಲುಮೆಯಿಂದಲೋ ಪರ ಸ್ತ್ರೀ ಸಂಗ ಮಾಡಿ ಮೈಮರೆಯುತ್ತೇವೆ. ಕೈಲಾಗದವರನ್ನು ಹಿಂಸಿಸಿ ಹರ್ಷಿಸುತ್ತೇವೆ. ಕುಡಿದು ವಾಹನಗಳನ್ನು ನಡೆಸುವುದು ಕಾನೂನು ಬಾಹಿರವೆಂದು ಗೊತ್ತಿದ್ದರೂ ಅದು ಒಂದು fashion ಅನ್ನೋ ತರ ಅದನ್ನೇ ಮಾಡಿ ಖುಷಿ ಪಡುತ್ತೇವೆ. ಟ್ರಾಫಿಕ್ ಸಿಗ್ನಲ್ ಗಳನ್ನು ಅಲಕ್ಷಿಸಿ, ಸಂಚಾರ ನಿಯಮಗಳನ್ನು ಮುರಿದು ಸಂತೋಷಪಡುತ್ತೇವೆ. ಬಸ್ಸುಗಳಲ್ಲಿ, ರೈಲುಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿ ನಾವೆಷ್ಟು ಬುದ್ದಿವಂತರು ಎಂದು ಗರ್ವಪಟ್ಟು ಕೊಳ್ಳುತ್ತೇವೆ. ಹೀಗೆ ಅದೆಷ್ಟೋ ಉದಾಹರಣೆಗಳನ್ನು ಕೊಡಬಹುದು.
ಇದನ್ನೆಲ್ಲಾ ಚಿಂತಿಸಿದಾಗ ಒಂದು ಅಂಶ ಸ್ಪಷ್ಟವಾಗುತ್ತದೆ. ನಿಷಿದ್ಧ ಕೆಲಸಗಳನ್ನು ಮಾಡುವಾಗ ಒಂದು ವಿಧವಾದ ವಿಲಕ್ಷಣ ಸಂತೋಷ ದೊರಕುತ್ತದೆ. ಯಾರು ಮಾಡದೇ ಇರುವ ಮಹಾನ್ ಕೆಲಸವನ್ನು ಮಾಡಿದ್ದೆವೆಂಬಾ ಹೆಮ್ಮೆ ಮೂಡುತ್ತದೆ. ಆದರೆ ಇದರಿಂದ ಬೇರೆಯವರಿಗೆ ಎಷ್ಟು ತೊಂದರೆಯಾಗುತ್ತದೆ ಎಂಬುದನ್ನು ನಾವು ಚಿಂತಿಸುವುದಿಲ್ಲ. ನಿಷಿದ್ಧವಾದ ಮಾರ್ಗವನ್ನು ಅನುಸರಿಸಿದಾಗ ನಾವು ಸ್ವಲ್ಪ ಕಾಲ ಸಂತೋಷವನ್ನು ಪಡೆಯಬಹುದು, ಅಥವಾ ಈ ಮಾರ್ಗ ಜಯಪ್ರದವೂ ಆಗಬಹುದು. ಆದರೆ ನಡೆಯುವವರೆಗೂ ನಾಣ್ಯ ಎಂಬುದನ್ನು ನಾವು ಮರೆಯಬಾರದು. ಒಂದು ಸಾರಿ ಮುಗ್ಗರಿಸಿದರೆ ಮೇಲೇಳುವುದು ತುಂಬಾ ಕಷ್ಟವಾಗುತ್ತದೆ. ಎದ್ದರೂ ಲೋಕದೆದುರಿಗೆ ತಲೆಯೆತ್ತಿ ನಡೆಯುವ ಧೈರ್ಯವಿಲ್ಲದಾಗಿರುತ್ತದೆ. ಜನತೆಯ ತಿರಸ್ಕಾರ, ಅಪಹಾಸ್ಯ, ಬಹಿಷ್ಕಾರ ಗಳಿಗೆ ತುತ್ತಾಗಬೇಕಾಗುತ್ತದೆ. ಇಂತಹ ಬಾಳನ್ನು ಬಾಳುವುದಕ್ಕಿನತ ಮೊದಲೇ ಈ ಬಗ್ಗೆ ಎಚ್ಚರವಹಿಸುವುದು ಉತ್ತಮವಲ್ಲವೇ ?
ಮಾಡಬೇಡ ಅನ್ನೋದನ್ನು ಮಾಡುವುದು ಮೊದಲಿಗೆ ವಿಲಾಸಮಯವಾಗಿ ಕಂಡು ಬಂದರೂ ಮುಂದೆ ವಿಷಾದದಲ್ಲಿ ಕೊನೆಗೊಳ್ಳುತ್ತದೆ. !!!! ಹಾಗಾದರೆ ನಿಷಿದ್ಧ ವಸ್ತುಗಳನ್ನು ವಿಷವೆಂದು ತಿಳಿದು ಸಮಾಜದಲ್ಲಿ ಹಸನಾದ ಬಾಳನ್ನು ಬಾಳೋಣ ವೇ ?