ಕ್ಷಣಿಕ ಸುಖದಾಸೆಗೆ ಇಹ ಮರೆತ ಪ್ರೇಮಿಗಳ
ಪ್ರೇಮದಾಟದ ಫಲವೋ
ಕಾಮುಕರ ಕಣ್ಣಿಗೆ ಬಲಿಯಾದ ಹೆಣ್ಣೊಬ್ಬಳ
ಮಾನಭಂಗದ ಫಲವೋ
ಹೆಣ್ಣು ಒಳಿತಲ್ಲ, ಗಂಡುಮಗು ಬೇಕೆಂಬವರ
ಮೂಢ ನಂಬಿಕೆಯ ಫಲವೋ
ಹಿಂದಿನ ಜನ್ಮದಲಿ ನಾ ಮಾಡಿರಬಹುದಾದ
ಘೋರ ಪಾಪಗಳ ಫಲವೋ
............................... ಹಡೆದ ತಾಯಿಗೆ ಬೇಡವಾಗಿ ಜನಿಸಿದೆ ನಾನು
ಕರುಳ ಕುಡಿಯನೇ ಕಿತ್ತು ತಿಪ್ಪೆಗೆ
ಎಸೆದ ಮಹಾತಾಯಿ ಯಾರೋ
ತಿಪ್ಪೆಯಿಂದೆತ್ತಿ ತಂದು ಸಂಭಂದ
ಬೆಸೆದ ಪುಣ್ಯಾತ್ಮರು ಯಾರೋ
ಹಸಿದಿರಲು ಹೊಟ್ಟೆ ಬಾಯಿಗೆ
ತುತ್ತು ಇಟ್ಟವರು ಯಾರೋ
ತುಂಡು ಬಟ್ಟೆಯ ಉಡಲು
ಕೊಟ್ಟವರು ಯಾರೋ
.................................. ರಸ್ತೆ ಬದಿಗಳಲಿ ಕಸ ಹೆಕ್ಕುತಿರುವೆ ನಾನು
ದೀಪಾವಳಿ, ಕ್ರಿಸ್ಮಸ್ , ರಂಜಾನ್ ಗಳೆಂಬಾ
ಹಬ್ಬಗಳು ನನಗಿಲ್ಲ
ಹೊಸವರುಷ, ಹೊಸಹರುಷ ಹೊಸ ಉಡುಪುಗಳಾ
ನಾನಿನ್ನು ನೋಡಿಲ್ಲ
ಭೂತ, ವರ್ತಮಾನ, ಭವಿಷ್ಯಗಳ
ಚಿಂತೆಯು ನನಗಿಲ್ಲ
ಕೊಲೆ ಸುಲಿಗೆ ದರೋಡೆಗಳ
ಭಯವಂತೂ ನನಗಿಲ್ಲ
..............................ಹೊಟ್ಟೆ ತುಂಬಾ ಉಂಡರೆ ಹಬ್ಬ ಎಂದುಕೊಂಡವಳು ನಾನು
ಮಳೆ ಗಾಳಿ ಬಿಸಿಲ ತಡೆದು ರಕ್ಷಣೆ ಕೊಡಲು
ನನಗೊಂದು ಸೂರಿಲ್ಲ
ಕಷ್ಟ ಕಾಲದಿ ಒದಗೋ ನೆಂಟರು ಬಂದು ಬಳಗ
ನನಗಿಂದು ಯಾರಿಲ್ಲ್ಲ
ವಿದ್ಯೆಯನು ಕೊಟ್ಟು ಬುದ್ದಿ ಕಲಿಸುವಂಥ
ಗುರುವೆಂಬುವವರಿಲ್ಲ
ಬಿಡುವಿನ ವೇಳೆಯಲಿ ಜೊತೆ ಆಡಲು ನನಗೆ
ಗೆಳೆತಿಯರೆಂಬುವರಿಲ್ಲ
...............................ದಿಕ್ಕು ದೆಸೆಯಿಲ್ಲದ ಅಲೆದಾಡುತಿರುವ ಅನಾಥೆ ನಾನು