Monday, March 8, 2010

ಹೊಸಬೆಳಕು



ಜೀವನವೆಂಬ ಜಟಿಲ ಸರಪಳಿಯಲ್ಲಿ
ಬಂದಿಯಾಗಿ ವಿಮೋಚನೆಗೆಂದು
ಬಿಕ್ಕುತ್ತಿರುವೆ ನಾನು


ಬೆಟ್ಟದಂತಿರುವ ಕಷ್ಟಗಳೆಡೆಯಲ್ಲಿ
ಸಿಕ್ಕಿ, ಮೇಲೆ ಬರಲೆಂದು
ಹೆಣಗಾಡುತ್ತಿರುವೆ ನಾನು

ಸೂತ್ರವಿಲ್ಲದ ಬಾಳಿನಲ್ಲಿ
ದಿಕ್ಕೆಟ್ಟು, ಗಾಳಿಪಟದಂತೆ
ಅಲ್ಲಿಲ್ಲಿ ಸುತ್ತುತ್ತಿರುವೆ ನಾನು


ಕೈಗಳಲ್ಲಿ ಕಸುವಿಲ್ಲದೆ
ತನ್ನವರ ಆಸರೆಯಿಲ್ಲದೆ
ಮರಳಿನರಮನೆಯಲ್ಲಿ ವಾಸವಾಗಿರುವೆ ನಾನು


ಪ್ರೀತಿಗಾಗಿ ಮನವ ಸವೆಸಿ
ಬುದ್ದಿ ವಿಭ್ರಣೆ ಮಾಡಿಕೊಂಡು
ಕಣ್ಣೀರಲ್ಲಿ ತೊಳಲಾಡುತ್ತಿರುವೆ ನಾನು


ಸಂಸಾರದ ಭಾರದಲ್ಲಿ ಕುಸಿದು
ಕಷ್ಟಗಳ ಕಹಿ ಬೇವ ಕುಡಿದು
ಅಳು ನುಂಗಿ ನಗುತ್ತಿರುವೆ ನಾನು


ಮನಸದು ಕೆಟ್ಟು ಹೋಗಿ
ಕನಸುಗಳು ವಿಕಾರವಾಗಿ
ದುಸ್ವಪ್ನದ ನಿದ್ರೆಯಲ್ಲಿ ಸಾಯುತ್ತಿರುವೆ ನಾನು


ಹರಿವ ನೀರಿನಲ್ಲಿ, ಕೊಳೆತ ಕೆಸರಿನಲ್ಲಿ
ಚಡಪಡಿಸುವ ಮೀನಿನಂತೆ
ಕಷ್ಟಪಟ್ಟು ಜೀವಿಸುತ್ತಿರುವೆ ನಾನು


ಬದುಕಿನ ಜಂಜಾಟವ ದೂರ ಮಾಡಿ
ಮನಕೆ ತಂಪೆರೆಯುವ
ಹೊಸಬೆಳಕಿಗಾಗಿ ಕಾಯುತ್ತಿರುವೆ ನಾನು.......