Wednesday, February 23, 2011

ಸಂಗದೋಷ

ಜೀವನದಲ್ಲಿ ಸಾಕ್ಷಾತ್ಕಾರವನ್ನು ಪಡೆಯಬೇಕಾದರೆ ಉತ್ತಮವಾದ ಶಿಕ್ಷಣ, ಶಿಕ್ಷಣದ ಜೊತೆಗೆ ಜ್ಞಾನವು ಬೇಕು.. ಈ ಜ್ಞಾನವು ನಾವು ಕೇವಲ ಶಾಲೆಯಲ್ಲಿ ಕಲಿಯುವ ಮೂಲಕ ಪಡೆಯಲು ಸಾಧ್ಯವಿಲ್ಲ. ನಮ್ಮಲ್ಲಿ ಒಳ್ಳೆಯ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಒಳ್ಳೆಯ ಪುಸ್ತಕ, ಜೀವನ ಚರಿತ್ರೆಗಳಂಥ ಗ್ರಂಥಗಳಿಂದ ಉತ್ತಮ ಜ್ಞಾನಾರ್ಜನೆ ಮಾಡಿಕೊಳ್ಳಲು ಸಾಧ್ಯವಾಗುವುದು. ಜೀವನದಲ್ಲಿ ಕೇವಲ ಉತ್ತಮ ಜ್ಞಾನಾರ್ಜನೆ ಮಾಡಿಕೊಂಡರೆ ಸಾಲದು.ನಾವು ಪಡೆದುಕೊಂಡ ಜ್ಞಾನವು ಸದುಪಯೋಗವಾಗ ಬೇಕೆಂದರೆ ನಮ್ಮ ಜೊತೆಗಾರರು, ಮಿತ್ರರು ಅಷ್ಟೇ ಒಳ್ಳೆಯರಾಗಿದ್ದರೆ ಮಾತ್ರ ನಾವು ನಮ್ಮ ಜೀವನದಲ್ಲಿ ಸಫಲತೆಯನ್ನು ಸಾಧಿಸಲು ಸಾಧ್ಯ. ಸಂಗದೋಷ ಜೀವಕ್ಕೆ ಸಂಚಕಾರ ತರುವಂತ ಸಾಧ್ಯತೆಗಳು ಇವೆ...ಅದಕ್ಕೆ ಒಂದು ಸಣ್ಣ ಉದಾಹರಣೆಯೆನ್ನುವಂತೆ ಕಪ್ಪೆ ಮತ್ತು ಇಲಿಯ ಕಥೆಯನ್ನು ಹೇಳಬಯಸುತ್ತೇನೆ-

ಒಂದೂರಿನಲ್ಲಿ ಒಂದು ದೊಡ್ಡ ಕೆರೆಯಿತ್ತು. ಆ ಕೆರೆಯಲ್ಲಿ ಮೀನು-ಕಪ್ಪೆ ಇತರ ಜಲಚರಗಳು ಸ್ನೇಹ ಜೀವಿಗಳಾಗಿದ್ದವು. ಮಧ್ಯಾನ್ನ ಕೆರೆಯ ನೀರು ಬಿಸಿಯಾಗುವುದರ ಕಾರಣ ಕಪ್ಪೆ ಕೆರೆಯ ತೀರದಲ್ಲಿ ಬಂದು ಆಟವಾಡುತಿತ್ತು. ಇದನ್ನು ಇಲಿಯೊಂದು ಕಂಡು ಕಪ್ಪೆಯ ಸ್ನೇಹ ಸಂಪಾದಿಸಲು ಅದರ ಬಳಿ ಪ್ರತಿದಿನ ಬರುತಿತ್ತು. ಕೆಲವೇ ದಿನಗಳಲ್ಲಿ ಅವೆರಡು ಆತ್ಮೀಯ ಸ್ನೇಹಿತರಾದವು. ಒಂದು ದಿನ ಇಲಿ ಕಪ್ಪೆಯನ್ನು ಉದ್ದೇಶಿಸಿ ''ನಾವಿಬ್ಬರೂ ಬಹಳ ದಿನಗಳಿಂದ ಆತ್ಮೀಯ ಸ್ನೇಹಿತರಾಗಿದ್ದೇವೆ. ನಮ್ಮಿಬ್ಬರ ಮಿತ್ರತ್ವವನ್ನು ಧ್ರಡಿಕೊಳಿಸಿಕೊಳ್ಳಲು ನಮ್ಮಿಬ್ಬರ ಕಾಲುಗಳನ್ನು ಒಂದೇ ಹಗ್ಗದಿಂದ ಕಟ್ಟಿಕೊಳ್ಳೋಣ. ಆಗ ನಾವಿಬ್ಬರೂ ಒಬ್ಬರನೊಬ್ಬರು ಅಗಲದೆ ಇರುತ್ತೇವೆ'' ಎಂದು ಹೇಳಿತು. ಅದಕ್ಕೆ ಮೂಢ ಕಪ್ಪೆಯು 'ಸರಿ' ಎಂಬಂತೆ ತಲೆ ಅಲ್ಲಾಡಿಸಿತು. ಕೂಡಲೇ ಇಲಿ ಓಡಿಹೋಗಿ ಇಂದು ಹಗ್ಗದ ತುಂಡನ್ನು ಹುಡುಕಿ ತಂದು ತನ್ನ ಮತ್ತು ಕಪ್ಪೆಯ ಕಾಲುಗಳೆರಡನ್ನು ಬಿಗಿಯಾಗಿ ಕಟ್ಟಿತು. ಅವು ಹೀಗೆ ಪ್ರತಿದಿನ ಆಟ ಆಡಿ ಕುಶಿ ಪಡುತಿದ್ದವು. ಒಂದು ಮಧ್ಯಾನ್ನ ಇವೆರಡು ಆಟ ಆಡುತ್ತಿರುವ ಸಮಯಕ್ಕೆ ಸರಿಯಾಗಿ ಆಕಾಶದಲ್ಲೊಂದು ಹದ್ದು ಹಾರಿ ಬಂದಿತು. ಅದನ್ನು ನೋಡಿದ ಕೂಡಲೇ ಕಪ್ಪೆ ಚಂಗನೆ ಜಿಗಿದು ಕೆರೆಯೊಳಗೆ ಹೋಗಿಬಿಟ್ಟಿತು. ಅದರೊಂದಿಗೆ ಹಗ್ಗದಿಂದ ಕಟ್ಟಲಾಗಿದ್ದ ಇಳಿಯು ಸಹ ಕೆರೆಯಲ್ಲಿ ಬಿದ್ದು ಪ್ರಾಣವನ್ನು ಕಳೆದುಕೊಂಡಿತು. ಅದು ಸತ್ತಿದ್ದರಿಂದಾಗಿ ನೀರಿನಲ್ಲಿ ತೇಲತೊಡಗಿತು. ಅಲ್ಲೇ ಹಾರಾಡುತಿದ್ದ   ಹದ್ದು ತೇಲುತಿದ್ದ ಇಲಿಯನ್ನು ಕಂಡು ಬಿರುಸಿನಿಂದ ಹಾರಿಬಂದು ಅದನ್ನು ಗಬಕ್ ಎಂದು ಹಿಡಿದು ಹಾರಿಕೊಂಡು ಹೋಯಿತು. ಇಲಿಯು ಹದ್ದಿನೊಂದಿಗೆ ಮೇಲೆ ಹೋಗಿದ್ದರಿಂದ ಅದರೊಂದಿಗೆ ಬಂಧಿತವಾಗಿದ್ದ ಕಪ್ಪೆಯು ಅದರೊಂದಿಗೆ ಹೋಗಬೇಕಾಗಿ ಬಂದಿತು. ಹದ್ದಿಗೆ ಎಲ್ಲಿಲ್ಲದ ಸಂತೋಷ.ಒಂದೇ ಬಾಣಕ್ಕೆ ಎರಡು ಹಕ್ಕಿಗಳು.. ಹರ್ಷದಲ್ಲಿ ವೇಗವಾಗಿ ಹಾರಿ ಒಂದು ಮರದ ಮೇಲೆ ಕುಳಿತುಕೊಂಡು ಕಪ್ಪೆ ಮತ್ತು ಇಲಿಗಳನ್ನು ತಿಂದು ತೇಗಿತು. ಹೀಗೆ ಇಲಿಯ ಸಹವಾಸದಿಂದ ಕಪ್ಪೆಯು ತನ್ನ ತನ್ನ ಪ್ರಾಣವನ್ನು ಕಳೆದುಕೊಂಡಿತು. *ಆದ್ದರಿಂದ ಸ್ನೇಹ ಬೆಳೆಸುವಾಗ ವಿಚಾರಮಾಡಿ ಒಳ್ಳೆಯವರ ಸ್ನೇಹ ಬೆಳೆಸುವುದು ಉತ್ತಮವಲ್ಲವೇ ?