Sunday, February 26, 2012

ಅನಾಥೆ



ರೈಲಿನಲ್ಲಿ ನಾನು ಕಂಡ 'ಕಸ ಹೆಕ್ಕುವ ಹುಡುಗಿ' ಯನ್ನು ಕುರಿತು ಈ ಕವನವನ್ನು ೨೦೦೯ ರಲ್ಲಿ ಬರೆದು ಬ್ಲಾಗ್ ನಲ್ಲಿ ಹಾಕಿದ್ದೆ. ನಾನು  ನನ್ನ ಕೆಲವು  ಗೆಳೆಯರು ಹಾಗು ನನ್ನ' ಬಾಸ್'  ಮಗನ ಸಹಾಯದಿಂದ ಆ ಹುಡುಗಿಯನ್ನು ನಮ್ಮ ಕಛೇರಿಗೆ ಹತ್ತಿರದಲ್ಲಿರುವ ಅನಾಥಶ್ರಮವೊಂದಕ್ಕೆ ೨೦೧೦ ರ ಫೆಬ್ರುವರಿ ೨೭ ರಂದು ಸೇರಿಸ್ಸುವಲ್ಲಿ ಯಶಶ್ವೀಯಾಗಿದ್ದೆ.  ಈಗ ಆ ಆಶ್ರಮದಲ್ಲಿ ಬೇರೆ ಮಕ್ಕಳ ಜೊತೆ ವಿದ್ಯಾಭ್ಯಾಸವನ್ನು ಮಾಡುತ್ತಿರುವ  ಆ ಹುಡುಗಿಗೆ 'ಮಾನಸಿ' ಎಂಬ ಹೆಸರನ್ನಿಟ್ಟು ಆಶ್ರಮದವರು  ಪ್ರತಿ ಫೆಬ್ರುವರಿ ತಿಂಗಳ ೨೭ ನ್ನು ಆಕೆಯ   ಜನ್ಮದಿನವೆಂದು ಆಚರಿಸುತಿದ್ದಾರೆ. ಅದರಂತೆಯೇ ನಾಳೆ ಆಕೆಯ ಜನ್ಮದಿನ......ಅವಳ ಭವಿಷ್ಯ ಸುಂದರವಾಗಿರ ಲೆಂದು ಕೋರುತ್ತಾ, ಶುಭಾಶಯವನ್ನು ಸಲ್ಲಿಸುತ್ತಾ  ಅವಳ ಕುರಿತು ಅಂದು ಬರೆದ ಕವನವನ್ನು ಪುನಃ ಇಲ್ಲಿ ಪ್ರಕಟಿಸುತಿದ್ದೇನೆ. .....










































[ಚಿತ್ರಕೃಪೆ - ಅಂತರ್ಜಾಲ ]




ಕ್ಷಣಿಕ ಸುಖದಾಸೆಗೆ ಇಹ ಮರೆತ ಪ್ರೇಮಿಗಳ
ಪ್ರೇಮದಾಟದ ಫಲವೋ
ಕಾಮುಕರ ಕಣ್ಣಿಗೆ ಬಲಿಯಾದ ಹೆಣ್ಣೊಬ್ಬಳ
ಮಾನಭಂಗದ ಫಲವೋ
ಹೆಣ್ಣು ಒಳಿತಲ್ಲ, ಗಂಡುಮಗು ಬೇಕೆಂಬವರ
ಮೂಢ ನಂಬಿಕೆಯ ಫಲವೋ
ಹಿಂದಿನ ಜನ್ಮದಲಿ ನಾ ಮಾಡಿರಬಹುದಾದ
ಘೋರ ಪಾಪಗಳ ಫಲವೋ
............................... ಹಡೆದ ತಾಯಿಗೆ ಬೇಡವಾಗಿ ಜನಿಸಿದೆ ನಾನು




ಕರುಳ ಕುಡಿಯನೇ ಕಿತ್ತು ತಿಪ್ಪೆಗೆ
ಎಸೆದ ಮಹಾತಾಯಿ ಯಾರೋ
ತಿಪ್ಪೆಯಿಂದೆತ್ತಿ ತಂದು ಸಂಭಂದ
ಬೆಸೆದ ಪುಣ್ಯಾತ್ಮರು ಯಾರೋ
ಹಸಿದಿರಲು ಹೊಟ್ಟೆ ಬಾಯಿಗೆ
ತುತ್ತು ಇಟ್ಟವರು ಯಾರೋ
ತುಂಡು ಬಟ್ಟೆಯ ಉಡಲು
ಕೊಟ್ಟವರು ಯಾರೋ
.................................. ರಸ್ತೆ ಬದಿಗಳಲಿ ಕಸ ಹೆಕ್ಕುತಿರುವೆ ನಾನು




ದೀಪಾವಳಿ, ಕ್ರಿಸ್ಮಸ್ , ರಂಜಾನ್ ಗಳೆಂಬಾ
ಹಬ್ಬಗಳು ನನಗಿಲ್ಲ
ಹೊಸವರುಷ, ಹೊಸಹರುಷ ಹೊಸ ಉಡುಪುಗಳಾ
ನಾನಿನ್ನು ನೋಡಿಲ್ಲ
ಭೂತ, ವರ್ತಮಾನ, ಭವಿಷ್ಯಗಳ
ಚಿಂತೆಯು ನನಗಿಲ್ಲ
ಕೊಲೆ ಸುಲಿಗೆ ದರೋಡೆಗಳ
ಭಯವಂತೂ ನನಗಿಲ್ಲ
..............................ಹೊಟ್ಟೆ ತುಂಬಾ ಉಂಡರೆ ಹಬ್ಬ ಎಂದುಕೊಂಡವಳು ನಾನು


ಮಳೆ ಗಾಳಿ ಬಿಸಿಲ ತಡೆದು ರಕ್ಷಣೆ ಕೊಡಲು
ನನಗೊಂದು ಸೂರಿಲ್ಲ
ಕಷ್ಟ ಕಾಲದಿ ಒದಗೋ ನೆಂಟರು ಬಂದು ಬಳಗ
ನನಗಿಂದು ಯಾರಿಲ್ಲ್ಲ
ವಿದ್ಯೆಯನು ಕೊಟ್ಟು ಬುದ್ದಿ ಕಲಿಸುವಂಥ
ಗುರುವೆಂಬುವವರಿಲ್ಲ
ಬಿಡುವಿನ ವೇಳೆಯಲಿ ಜೊತೆ ಆಡಲು ನನಗೆ
ಗೆಳೆತಿಯರೆಂಬುವರಿಲ್ಲ
...............................ದಿಕ್ಕು ದೆಸೆಯಿಲ್ಲದ ಅಲೆದಾಡುತಿರುವ ಅನಾಥೆ ನಾನು

Friday, February 17, 2012

ಕುಂದಾಪ್ರ ಜನಪದ

ಕರ್ನಾಟಕದ್ ಕೆಲು ಭಾಷೆಗಳಲ್ ನಮ್ ಕುಂದಾಪ್ರ ಭಾಷಿಯು ಒಂದ್. ಕೆಲ್ವರಿಗ್ ಈ ಭಾಷಿ ಅರ್ಥ ಆತಿಲ್ಲ ಅಂಬ್ರ್...ನಾವ್ ನಮ್ ಭಾಷೆಗ್ ಮಾತಾಡ್ರ್ ಕನ್ನಡ ಬಪ್ಪರು ಕೆಂಬ್ದ್ ಇದ್ ಯಾವ್ ಭಾಷಿ ಮರೆರೆ ಅಂದ್ಹೇಲಿ..'ಕುಂದ ಕನ್ನಡ' ಅಂದ್ರೆ ನಮ್ ಕುಂದಾಪ್ರ ಭಾಷಿ ಕಾಣಿ. ನಾವ್ ಮಾತಡುವತಿಗೆ ಜಾಸ್ತಿ ಎಳುಕ್ ಹ್ವಾತಿಲ್ಲ...ಶಾರ್ಟ್ ಕಟ್ .......ನಮ್ ಕುಂದಾಪ್ರ ಭಾಷಿ ಬಗ್ ಹೇಳುಕ್ ಹ್ವಾರೆ ಒಂದೆರಡ್ ಪೇಜೆಗ್ ಬರ್ದ್ ಹೇಳುಕ್ ಆಪ್ದ್ ಅಲ್ಲ....ನಾನ್ ಇಲ್ ಕುಂದಾಪ್ರ ಭಾಷಿ ಬಗ್ ಬರುವ ಅಂದ್ಹೇಲಿ ಬಂದದಲ್ಲ ....ಕುಂದಾಪ್ರ ಭಾಷಿ ಬಗ್ಗೆ ಇನ್ನೊಂದ್ ಸಲ ಹೇಳ್ತೆ ಅಕಾ....ನಾನ್ ನಿಮ್ಮೊಟ್ಟಿಗೆ ಕೆಲು ನಮ್ ಕುಂದಪ್ರದ್ 'ಜನಪದ' ಹಾಡ್ ಶೇರ್ ಮಾಡ್ಕಂಬ ಅಂದ್ಹೇಲಿ ಬಂದದ್...


ನಮ್ ಕುಂದಾಪ್ರದೆಗೆ ಮೊದ್ಲ್ ಭತ್ತ ತೊಳುವತಿಗೆ, ಮಗುವಿನ್ ತೊಟ್ಲ್ ತೂಗುವತಿಗೆ ಹೆಂಗ್ಸ್ರ್ ಪದ್ಯ ಹೇಳ್ತಾ ಇದ್ರ್. ಈಗ ಇದೆಲ್ಲಾ ಕೈದ್ ಐತ್.....ಅಂತ ಕೆಲು ಪದ್ಯಗಳನ್ ನಿಮ್ ಒಟ್ಟಿಗೆ ಹಂಚ್ಕಂಬಕೆ ನಂಗೆ ಖುಷಿ ಆತಿತ್......


ಭತ್ತ ತೊಳು ಕೈಗೆ ಬಯ್ಣಿ ಮುಳ್ಳ ಹೆಟ್ಟಿತ, ಮದ್ದಿಗ್ ಹ್ವಾದಣ್ಣ ಬರಲಿಲ್ಲಾ
ಮದ್ದಿಗ್ ಹ್ವಾದಣ್ಣ ಬರಲಿಲ್ಲಾ ಬಸರೂರ್ ಸೂಳಿ ಕಂಡಲ್ಲೇ ಒರಗಿದಾ....
ಹ್ಯಾo ಹ್ಞೂ..... ಹ್ಯಾ ಹ್ಞೂ .....

ಅಕ್ಕ ಸಾಕಿದ ಕೋಳಿ ಅಂಕದಲರ್ಜುನಾ, ನಾ ಸಾಕಿದ ಕೋಳಿ ಉರಿ ಹುಂಜಾ...
ನಾ ಸಾಕಿದ ಕೋಳಿ ಉರಿ ಹುಂಜಾ ಕೂಗಿದರೆ ಲಂಕಾ ಪಟ್ಟಣವೇ ಬೆಳಗೈತು....
ಹ್ಯಾo ಹ್ಞೂ ಹ್ಯಾ ಹ್ಞೂ ...

ಒಂದ್ ಮಲ್ಲಿಗಿ ಮಿಟ್ಟಿ ಅಲ್ಲಿಟ್ಟಿ ಇಲ್ಲಿಟ್ಟಿ, ಕಲ್ಲಾ ಮೇಲಿಟ್ಟಿ ಕೈ ಬಿಟ್ಟಿ..
ಕಲ್ಲಾ ಮೇಲಿಟ್ಟಿ ಕೈ ಬಿಟ್ಟಿ ಮಂದಾರ್ತಿ ತೇರ ಮೇಲಿಟ್ಟಿ ಕೈ ಮುಗ್ದಿ ..
ಹ್ಯಾಂ ಹ್ಞೂ ...ಹ್ಯಾಂ ಹ್ಞೂ .....

ಹಳ್ಳಿ ಮೇಲಿನ ಹುಡುಗ ಹಲ್ಲೆಲ್ಲ ಬೆಳ್ಳಗೆ ಬೆಳ್ಳುಳ್ಳಿ ಗೆಂಡೆ ಬಗಲಾಗೆ,
ಬೆಳ್ಳುಳ್ಳಿ ಗೆಂಡೆ ಬಗಲಾಗೆ ಇಟ್ಕೊಂಡು ಮರಳು ಮಾಡಿದನೆ ಹುಡುಗೀರ ....
ಹ್ಯಾಂ ಹ್ಞೂ...ಹ್ಯಾಂ ಹ್ಞೂ..

ಹಾದಿ ಮೇಲ್ ಹ್ವಾಪರೆ ಹಾಡೆಂದು ಕಾಣಬೇಡಿ, ಹಾಡಲ್ಲ ನನ್ನ ಒಡಲೂರಿ
ಹಾಡಲ್ಲ ನನ್ನ ಒಡಲೂರಿ ದೇವರೇ ಬೆವರಲ್ಲ ನನ್ನ ಕಣ್ಣೀರು ...
ಹ್ಯಾಂ ಹ್ಞೂ ....ಹ್ಯಾಂ ಹ್ಞೂ....

ನಮ್ಮನಿ ಸುತ್ತಲೂ ಕೆಮ್ಮಣ್ಣಿನ ಪಾಗಾರ, ಧೂಳ ಕಾಲವರೆ ಬರಬೇಡಿ ...
ಧೂಳ ಕಾಲವರೆ ಬರಬೇಡಿ ನಮ್ಮನೆಗೆ ಚಿನ್ನದ ಕಾಲ್ ಒಡೆಯರು ಬರುತಾರೆ ...
ಹ್ಯಾಂ ಹ್ಞೂ ...ಹ್ಯಾಂ ಹ್ಞೂ........

ಕೆಂಪು ಹೆಂಡತಿಯೆಂದು ಸಂತೋಷ ಪಡಬ್ಯಾಡ
ಅತ್ತಿಯ ಹಣ್ಣು ಬಲು ಕೆಂಪು
ಅತ್ತಿಯ ಹಣ್ಣು ಬಲು ಕೆಂಪು ಅಣ್ಣಯ್ಯ
ಬಿಚ್ಚಿ ಕಂಡರೆ ಹುಳು ಬಾಳ ......
ಹ್ಯಾಂ ಹ್ಞೂ ಹ್ಯಾಂ ಹ್ಞೂ...........

ಹೊಸ ನೆಂಟ್ರ ಬಂದೀರ್, ಹಸಿ ಹಾಕಿ ನೀರ್ ಕೊಡಿ
ಹಸಿನ್ ಹಾಲೆಗ್ ಎಸರಿಡಿ
ಹಸಿನ್ ಹಾಲೆಗೆ ಎಸರಿಡಿ ನಮ್ಮನಿ
ಹೆಸರು ಹತ್ತುರೇ ನೆನೆಯಲಿ.....
ಹ್ಯಾಂ ಹ್ಞೂ ಹ್ಯಾಂ ಹ್ಞೂ..................


ಭತ್ತ ತೊಳು ಹೆಣ್ಮಕ್ಳೆ ಅತ್ತಿತ್ತ ಕಾಣ್ಬೇಡಿ
ಬರ್ತಾರೆ ನಿಮ್ಮ ಬಗಿಯರ್
ಬರ್ತಾರೆ ನಿಮ್ಮ ಬಗಿಯರ್ ಹೆಣ್ಮಕ್ಳೆ
ತರ್ತಾರೆ ನಿಮಗೆ ತೌಡ್ ಹಿಟ್ಟ.....
ಹ್ಯಾಂ ಹ್ಞೂ ಹ್ಯಾಂ ಹ್ಞೂ........


ಒಂದಕ್ಕಿ ಬೆಂದಿತ್ ಒಂದಕ್ಕಿ ಬೈಲಿಲ್ಲ
ಬೆಂಗೇರಿ ಸೌದಿ ಹಿಡಿಲಿಲ್ಲ
ಬೆಂಗೇರಿ ಸೌದಿ ಹಿಡಿಲಿಲ್ಲ ಅಣ್ಣಯ್ಯ
ಗಂಧದ ಚೆಕ್ಕಿ ಒಡಕ್ಕೋಡ...
ಹ್ಯಾಂ ಹ್ಞೂ...ಹ್ಯಾಂ ಹ್ಞೂ..

ಪಾರಿಜಾತದ ಹೂಗು ಪಾಗಾರಕೆರಗಿತು
ಯಾರಮ್ಮ ಹೂಗು ಕೊಯ್ಯಿಬ್ಯಾಡಿ
ಯಾರಮ್ಮ ಹೂಗು ಕೊಯ್ಯಿಬ್ಯಾಡಿ ನಮ್ಮಾನಿ
ದೇವ್ರಿಗೆ ಬೇಕು ಹೊಸ ಹೂಗು...
ಹ್ಯಾಂ ಹ್ಞೂ...ಹ್ಯಾಂ ಹ್ಞೂ

ಅಪ್ಪೈನ ಮನೆಯಲ್ಲೋ ಎಪ್ಪತ್ತು ತೆಂಗಿನ ಮರ
ಕೊನಿ ನೂರ್ ಅದ್ಕೆ ಹೆಡಿ ನೂರು
ಕೊನಿ ನೂರ್ ಅದ್ಕೆ ಹೆಡಿ ನೂರು ಅಪ್ಪಯ್ಯ
ನಂಗೂ ನನ್ ತಂಗಿಗೂ ಸರ್ ಪಾಲು....
ಹ್ಯಾಂ ಹ್ಞೂ...ಹ್ಯಾಂ ಹ್ಞೂ...

ಕೆಳ ಗೆದ್ದಿ ಕೆಸರೆಂದ ಮೇಲ್ ಗೆದ್ದಿ ಬಿಸಿಲೆಂದ
ಹೂಗಿನ್ ಹೆದ್ದರೀನೆ ಹಿಡಿದಾನ
ಹೂಗಿನ್ ಹೆದ್ದರೀನೆ ಹಿಡಿದಾನ ನನ್ ತಮ್ಮ
ಅದ್ ನಮ್ಮ ತಾಯಿ ತವರೂರು
ಹ್ಯಾಂ ಹ್ಞೂ...ಹ್ಯಾಂ ಹ್ಞೂ... [ಇನ್ನೂ ಇತ್ತ್...ಇನ್ನೊಂದ್ ಸಲ ಬರೀತೆ]