Sunday, August 14, 2011

ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.ನನ್ನೆಲ್ಲಾ ಬ್ಲಾಗ್  ಬಾಂಧವರಿಗೆ ನಿಮ್ಮ ಮಿತ್ರ, ಸಹೋದರನ  ವಂದನೆಗಳು. ಕೆಲಸದ ಒತ್ತಡ ಹಾಗೂ ಕುಟುಂಬದ ಸದಸ್ಯರೊಬ್ಬರ ದುರ್ಮರಣದ ಕಾರಣದಿಂದ ಬ್ಲಾಗ್ ಕಡೆಗೆ ಬರಲಾಗಲಿಲ್ಲ. ಬ್ಲಾಗ್ ನಲ್ಲಿ ಏನು ಬರೆದಿಲ್ಲ ಎಂಬ ಬೇಸರಕ್ಕಿಂತ ನನ್ನ ಬ್ಲಾಗ್ ಮಿತ್ರರ ಉತ್ತಮ ಕವನ, ಕಥೆ, ಲೇಖನ ಗಳನ್ನು ಓದಲಿಕ್ಕೆ ಆಗಿಲ್ಲ ಎಂಬ ಬೇಸರವೇ ಜಾಸ್ತಿ ಇದೆ. ಎಲ್ಲರ ಬ್ಲಾಗ್ ಗೂ ಭೇಟಿಕೊಟ್ಟು ಎಲ್ಲಾ ಬರಹ ಗಳನ್ನು ನಿಧಾನವಾಗಿ ಓದುತಿದ್ದೇನೆ. ಎಲ್ಲದಕ್ಕೂ ಕಾಮೆಂಟ್ ಮಾಡಲಾಗದಿದ್ದರೂ ಎಲ್ಲಾ ಬರಹಗಳನ್ನು ಓದುವ ಪ್ರಯತ್ನ ಮಾಡುತಿದ್ದೇನೆ. ಹಾಗೆ ಈ ತಿಂಗಳಿಂದ ನನ್ನ ಬ್ಲಾಗ್ ನಲ್ಲೂ ಕೆಲವು ಬರಹಗಳು ಬರಲಿವೆ. ಅವುಗಳನ್ನು ಓದಿ ಮೊದಲಿನಂತೆ ನನ್ನನ್ನು ಪ್ರೋತ್ಸಾಹಿಸುತ್ತೀರಿ ಎಂದು ನಂಬಿರುತ್ತೇನೆ.

ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು. 

Sunday, April 17, 2011

ಕನಸು- ನನಸು


ಜೀವನದಲ್ಲಿ ನಾವು ಅದೆಷ್ಟೋ ಕನಸುಗಳನ್ನು ಕಾಣುತ್ತೇವೆ. ಕಂಡ ಕನಸುಗಳೆಲ್ಲಾ ನನಸಾಗುವುದಿಲ್ಲ. ಕಾಲಕ್ಕೆ ತಕ್ಕಂತೆ ಕನಸುಗಳಲ್ಲೂ ಮಾರ್ಪಾಡಾಗುತ್ತವೆ. ನಾನು ಹೈಸ್ಕೂಲ್ ಹೋಗುತ್ತಿರುವಾಗ 'ವೈದ್ಯ' ನಾಗಬೇಕೆಂಬ ಕನಸು ಕಂಡವ. ಆದರೆ ಅದು ನನಸಾಗಲಿಲ್ಲ. ಹಾಗೇಯೇ ಕಂಡ ಇನ್ನು ಕೆಲವು ಕನಸುಗಳಲ್ಲಿ ಒಂದು ಕನಸು ಈಗ ನನಸಾಗುತ್ತಿದೆ....ಅದೇ ಸಂತೋಷದಲ್ಲಿ ಮನಸ್ಸಿಗೆ ಬಂದ ಕೆಲವು ಸಾಲುಗಳನ್ನು ನಿಮ್ಮ ಮುಂದಿಡುತಿದ್ದೇನೆ..........
ಚಿತ್ರ ಕೃಪೆ - ಅಂತರ್ಜಾಲ 

ಜೀವನದಿ ಕಂಡೆ ಕನಸು ಹತ್ತು ಹಲವನು
ಅದರಲ್ಲೊಂದ ಬೆನ್ನ ಹತ್ತಿ ಮುಂದೆ ನಡೆದೆನು
ದಾರಿ ಮಧ್ಯೆ ಸಾವಿರಾರು ತೊಡಕು ಕಂಡೆನು 
ಬಾಂಧವ್ಯಗಳ ನಡುವಿನಲ್ಲೂ ಒಡಕು ಕಂಡೆನು 

ಎಷ್ಟೋ ವ್ಯರ್ಥ ಯತ್ನಗಳು ನಿರಾಸೆ ತಂದವು
ಪ್ರಶ್ನೆ ಮೇಲೆ ಪ್ರಶ್ನೆಗಳೇ ಮೂಡಿ ಬಂದವು 
ಹೃದಯದೊಳಗೆ ವೇದನೆಯು ಮನೆಯ ಮಾಡಲು 
ಮನಸು ಹೇಳುತಿತ್ತು ಮರಳಿ ಯತ್ನ ಮಾಡಲು 

ಜೀವನದ ಕಟು ಸತ್ಯಗಳು  ಅರ್ಥವಾದರೂ 
ಇಷ್ಟರಲ್ಲೇ ತುಂಬಾ ಸಮಯ ವ್ಯರ್ಥವಾಯಿತು 
ಬಂಧುಗಳ ಅಸಹಕಾರ ಸ್ಪಷ್ಟವಾದರೂ 
ಮುನ್ನುಗ್ಗೋ ಆಸೆ ಮನಸ್ಸಿನಲ್ಲಿ ದಟ್ಟವಾಯಿತು

ದೇಹಕ್ಕೀಗ ಒಂದು ಹೊಸ ಹುರುಪು ಬಂದಿದೆ
ಮಾಸಿ ಹೋದ ಕಣ್ಣುಗಳಲೂ  ಹೊಳಪು ಕಂಡಿದೆ
ಕೃಶ ದೇಹದಲ್ಲೂ ಈಗ  ಕಸುವು ಮೂಡಿದೆ  
ಮರಳಿ ಮಾಡಿದ ಯತ್ನವು ಯಶವ ತಂದಿದೆ

ಮನಸ್ಸಿನಾಳದಲ್ಲಿ ಮತ್ತೆ ಆಸೆ ಮೂಡಿದೆ
ಕನಸು ನನಸಾಗುವಂತೆ ಭಾಸವಾಗಿದೆ
ಮುದುಡಿ ಹೋದ ಸುಮವು ಈಗ ಅರಳತೊಡಗಿದೆ
ಗಡ್ದೆಯಾದ ಹಿಮವು ಕೂಡ ಕರಗತೊಡಗಿದೆ....


Friday, April 8, 2011

ಮೇಘ - ಮಳೆ


ಚಿತ್ರ ಕೃಪೆ ಇಟ್ಟಿಗೆ ಸಿಮೆಂಟು ಪ್ರಕಾಶ್ ಹೆಗ್ಡೆ


ನೀಲಿ ಬಾನಂಗಳದಿ  ಕಾರ್ಮೋಡ ಕವಿದಿದೆ
ಮೇಘಗಳ ಭಾರಕ್ಕೆ ಗಗನವದು ಬಾಗಿದೆ
ಸುತ್ತ ಮುತ್ತಲೂ ಎಲ್ಲಾ ಕತ್ತಲೆಯು ಕವಿದಿದೆ 
ಹಗಲು ಹೊತ್ತು ಕೂಡ ಇರುಳೆನಿಸಿ ಬಿಟ್ಟಿದೆ 

ಆಗಿಹುದು ಢಿಕ್ಕಿ ಮೋಡಕ್ಕೆ ಮೋಡ 
ನೋವಲ್ಲಿ  ಬಿಕ್ಕಿ ಬಿಕ್ಕಿ ಅಳುತಿಹುದ  ನೋಡ
 ಕಣ್ಣೀರ ಧಾರೆ ಹರಿದಿಹುದು ಧರೆಗೆ 
'ಮಳೆ' ಎನ್ನುವೆವು ಈ 'ಕಣ್ಣೀರ ಕೋಡಿ' ಗೆ...[ವಿ.ಸೂ.  ಬ್ಲಾಗ್  ಮಿತ್ರರಾದ  ಪ್ರಕಾಶ್  ಹೆಗ್ಡೆ  ಯವರು  ತಮ್ಮ  ಬ್ಲಾಗ್   'ಛಾಯಾ-ಚಿತ್ತಾರ'  ಬ್ಲಾಗ್ ನಲ್ಲಿ ಪ್ರಕಟಿಸಿದ ಕವನ ಹಾಗೂ ಚಿತ್ರಕ್ಕೆ ಪ್ರತಿಕ್ರೀಯೆ ಯಾಗಿ ನಾನು ಬರೆದ ಸಾಲುಗಳಿವು. ಇದೆ ಚಿತ್ರಕ್ಕೆ ಹೊಂದುವಂತೆ   ಪರಾಂಜಪೆ ಸರ್ , ಆಜಾದ್ ಸರ್  ರವರು ಇದೇ ಬ್ಲಾಗ್ ನಲ್ಲಿ  ಬರೆದಿರುವ ಸುಂದರ ಸಾಲಗಳು ಹಾಗೂ ಮತ್ತೊಬ್ಬ ಬ್ಲಾಗ್ ಮಿತ್ರ ಮಹಾಬಲ ಗಿರಿ ಭಟ್ ರು ತಮ್ಮ 'ಕರಾವಳಿ ರೈಲು' ಬ್ಲಾಗ್ ನಲ್ಲಿ ಹೆಣೆದಿರುವ ಸುಂದರ ಕವಿತೆಯನ್ನು ಮರೆಯದೇ ಓದಿ ]

http://bhava-manthana.blogspot.com/

http://chaayaachittara.blogspot.com/

Wednesday, February 23, 2011

ಸಂಗದೋಷ

ಜೀವನದಲ್ಲಿ ಸಾಕ್ಷಾತ್ಕಾರವನ್ನು ಪಡೆಯಬೇಕಾದರೆ ಉತ್ತಮವಾದ ಶಿಕ್ಷಣ, ಶಿಕ್ಷಣದ ಜೊತೆಗೆ ಜ್ಞಾನವು ಬೇಕು.. ಈ ಜ್ಞಾನವು ನಾವು ಕೇವಲ ಶಾಲೆಯಲ್ಲಿ ಕಲಿಯುವ ಮೂಲಕ ಪಡೆಯಲು ಸಾಧ್ಯವಿಲ್ಲ. ನಮ್ಮಲ್ಲಿ ಒಳ್ಳೆಯ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಒಳ್ಳೆಯ ಪುಸ್ತಕ, ಜೀವನ ಚರಿತ್ರೆಗಳಂಥ ಗ್ರಂಥಗಳಿಂದ ಉತ್ತಮ ಜ್ಞಾನಾರ್ಜನೆ ಮಾಡಿಕೊಳ್ಳಲು ಸಾಧ್ಯವಾಗುವುದು. ಜೀವನದಲ್ಲಿ ಕೇವಲ ಉತ್ತಮ ಜ್ಞಾನಾರ್ಜನೆ ಮಾಡಿಕೊಂಡರೆ ಸಾಲದು.ನಾವು ಪಡೆದುಕೊಂಡ ಜ್ಞಾನವು ಸದುಪಯೋಗವಾಗ ಬೇಕೆಂದರೆ ನಮ್ಮ ಜೊತೆಗಾರರು, ಮಿತ್ರರು ಅಷ್ಟೇ ಒಳ್ಳೆಯರಾಗಿದ್ದರೆ ಮಾತ್ರ ನಾವು ನಮ್ಮ ಜೀವನದಲ್ಲಿ ಸಫಲತೆಯನ್ನು ಸಾಧಿಸಲು ಸಾಧ್ಯ. ಸಂಗದೋಷ ಜೀವಕ್ಕೆ ಸಂಚಕಾರ ತರುವಂತ ಸಾಧ್ಯತೆಗಳು ಇವೆ...ಅದಕ್ಕೆ ಒಂದು ಸಣ್ಣ ಉದಾಹರಣೆಯೆನ್ನುವಂತೆ ಕಪ್ಪೆ ಮತ್ತು ಇಲಿಯ ಕಥೆಯನ್ನು ಹೇಳಬಯಸುತ್ತೇನೆ-

ಒಂದೂರಿನಲ್ಲಿ ಒಂದು ದೊಡ್ಡ ಕೆರೆಯಿತ್ತು. ಆ ಕೆರೆಯಲ್ಲಿ ಮೀನು-ಕಪ್ಪೆ ಇತರ ಜಲಚರಗಳು ಸ್ನೇಹ ಜೀವಿಗಳಾಗಿದ್ದವು. ಮಧ್ಯಾನ್ನ ಕೆರೆಯ ನೀರು ಬಿಸಿಯಾಗುವುದರ ಕಾರಣ ಕಪ್ಪೆ ಕೆರೆಯ ತೀರದಲ್ಲಿ ಬಂದು ಆಟವಾಡುತಿತ್ತು. ಇದನ್ನು ಇಲಿಯೊಂದು ಕಂಡು ಕಪ್ಪೆಯ ಸ್ನೇಹ ಸಂಪಾದಿಸಲು ಅದರ ಬಳಿ ಪ್ರತಿದಿನ ಬರುತಿತ್ತು. ಕೆಲವೇ ದಿನಗಳಲ್ಲಿ ಅವೆರಡು ಆತ್ಮೀಯ ಸ್ನೇಹಿತರಾದವು. ಒಂದು ದಿನ ಇಲಿ ಕಪ್ಪೆಯನ್ನು ಉದ್ದೇಶಿಸಿ ''ನಾವಿಬ್ಬರೂ ಬಹಳ ದಿನಗಳಿಂದ ಆತ್ಮೀಯ ಸ್ನೇಹಿತರಾಗಿದ್ದೇವೆ. ನಮ್ಮಿಬ್ಬರ ಮಿತ್ರತ್ವವನ್ನು ಧ್ರಡಿಕೊಳಿಸಿಕೊಳ್ಳಲು ನಮ್ಮಿಬ್ಬರ ಕಾಲುಗಳನ್ನು ಒಂದೇ ಹಗ್ಗದಿಂದ ಕಟ್ಟಿಕೊಳ್ಳೋಣ. ಆಗ ನಾವಿಬ್ಬರೂ ಒಬ್ಬರನೊಬ್ಬರು ಅಗಲದೆ ಇರುತ್ತೇವೆ'' ಎಂದು ಹೇಳಿತು. ಅದಕ್ಕೆ ಮೂಢ ಕಪ್ಪೆಯು 'ಸರಿ' ಎಂಬಂತೆ ತಲೆ ಅಲ್ಲಾಡಿಸಿತು. ಕೂಡಲೇ ಇಲಿ ಓಡಿಹೋಗಿ ಇಂದು ಹಗ್ಗದ ತುಂಡನ್ನು ಹುಡುಕಿ ತಂದು ತನ್ನ ಮತ್ತು ಕಪ್ಪೆಯ ಕಾಲುಗಳೆರಡನ್ನು ಬಿಗಿಯಾಗಿ ಕಟ್ಟಿತು. ಅವು ಹೀಗೆ ಪ್ರತಿದಿನ ಆಟ ಆಡಿ ಕುಶಿ ಪಡುತಿದ್ದವು. ಒಂದು ಮಧ್ಯಾನ್ನ ಇವೆರಡು ಆಟ ಆಡುತ್ತಿರುವ ಸಮಯಕ್ಕೆ ಸರಿಯಾಗಿ ಆಕಾಶದಲ್ಲೊಂದು ಹದ್ದು ಹಾರಿ ಬಂದಿತು. ಅದನ್ನು ನೋಡಿದ ಕೂಡಲೇ ಕಪ್ಪೆ ಚಂಗನೆ ಜಿಗಿದು ಕೆರೆಯೊಳಗೆ ಹೋಗಿಬಿಟ್ಟಿತು. ಅದರೊಂದಿಗೆ ಹಗ್ಗದಿಂದ ಕಟ್ಟಲಾಗಿದ್ದ ಇಳಿಯು ಸಹ ಕೆರೆಯಲ್ಲಿ ಬಿದ್ದು ಪ್ರಾಣವನ್ನು ಕಳೆದುಕೊಂಡಿತು. ಅದು ಸತ್ತಿದ್ದರಿಂದಾಗಿ ನೀರಿನಲ್ಲಿ ತೇಲತೊಡಗಿತು. ಅಲ್ಲೇ ಹಾರಾಡುತಿದ್ದ   ಹದ್ದು ತೇಲುತಿದ್ದ ಇಲಿಯನ್ನು ಕಂಡು ಬಿರುಸಿನಿಂದ ಹಾರಿಬಂದು ಅದನ್ನು ಗಬಕ್ ಎಂದು ಹಿಡಿದು ಹಾರಿಕೊಂಡು ಹೋಯಿತು. ಇಲಿಯು ಹದ್ದಿನೊಂದಿಗೆ ಮೇಲೆ ಹೋಗಿದ್ದರಿಂದ ಅದರೊಂದಿಗೆ ಬಂಧಿತವಾಗಿದ್ದ ಕಪ್ಪೆಯು ಅದರೊಂದಿಗೆ ಹೋಗಬೇಕಾಗಿ ಬಂದಿತು. ಹದ್ದಿಗೆ ಎಲ್ಲಿಲ್ಲದ ಸಂತೋಷ.ಒಂದೇ ಬಾಣಕ್ಕೆ ಎರಡು ಹಕ್ಕಿಗಳು.. ಹರ್ಷದಲ್ಲಿ ವೇಗವಾಗಿ ಹಾರಿ ಒಂದು ಮರದ ಮೇಲೆ ಕುಳಿತುಕೊಂಡು ಕಪ್ಪೆ ಮತ್ತು ಇಲಿಗಳನ್ನು ತಿಂದು ತೇಗಿತು. ಹೀಗೆ ಇಲಿಯ ಸಹವಾಸದಿಂದ ಕಪ್ಪೆಯು ತನ್ನ ತನ್ನ ಪ್ರಾಣವನ್ನು ಕಳೆದುಕೊಂಡಿತು. *ಆದ್ದರಿಂದ ಸ್ನೇಹ ಬೆಳೆಸುವಾಗ ವಿಚಾರಮಾಡಿ ಒಳ್ಳೆಯವರ ಸ್ನೇಹ ಬೆಳೆಸುವುದು ಉತ್ತಮವಲ್ಲವೇ ?