Monday, October 11, 2010

ವಿನಾಶದ ಹಾದಿಯಲ್ಲಿದೆ ದೇಶ








ಅಲ್ಲೊಂದು ಇಲ್ಲೊಂದು ಭಯೋತ್ಪಾದಕ ದಾಳಿ
ಕೊಲೆ ಸುಲಿಗೆ ಬಾಂಬ್-ಸ್ಫೋಟ ರಕ್ತದೋಕುಳಿ
ಕೆಲವೆಡೆ ಬರಗಾಲ ಕೆಲವೆಡೆ ನೆರೆ ಹಾವಳಿ
ಸಾಯುತಿಹರಿಲ್ಲಿ ಜನ ಹೊಸ ರೋಗಗಳಿಗೆ ನರಳಿ



ಮಳೆ ಬೀಳೋ ಪ್ರಮಾಣ ಆಗಿಹುದು ವಿರಳ
ನದಿ ನೀರಿಗಾಗಿ ಒಳಗೊಳಗೇ ಜಗಳ
ಇದೋ ಕರ್ನಾಟಕ, ಮಹಾರಾಷ್ಟ್ರ, ಕೇರಳ
ಗಡಿಗಾಗಿ ಆಗಿಹುದು ವಿವಾದವು ಬಹಳ



ಬಿಟ್ಟಿಲ್ಲ ಮಾನವರು ಅರಣ್ಯ ನಾಶದ ಚಾಳಿ
ವಿಷಪೂರಿತವಾಗಿದೆ ಉಸಿರಾಡೋ ಗಾಳಿ
ಆಹಾರ ಪದಾರ್ಥಗಳಿಗೆ ಕಲಬೆರೆಕೆಯ ದಾಳಿ
ಕಾರ್ಖಾನೆಗಳಿಂದ 'ಮಾಲಿನ್ಯ' ಎಂಬ ಬಳುವಳಿ



'ಬೆಲೆಯೇರಿಕೆ' ಎಂಬ ರಾಕ್ಷಸನ ಆರ್ಭಟ
ಸಾಗುತ್ತಲೇ ಇದೆ ಬಡಜನರ ಒದ್ದಾಟ
ನಿರುದ್ಯೋಗಿಗಳಿಗೆ ನೌಕರಿಗೆ ಪರದಾಟ
ಇನ್ನೊಂದು ಸಮಸ್ಯೆ ಜನಸಂಖ್ಯಾ ಸ್ಫೋಟ



ದೇಶದೆಲ್ಲೆಡೆಯಲ್ಲೂ ಹೊಗೆಯಾಡುತಿದೆ ಅಶಾಂತಿ
ಕಾಪಾಡಬೇಕಿದೆ ಸಮನ್ವಯ -ಶಾಂತಿ
ಜನನಾಯಕರುಗಳಿಗೆ ಕುರ್ಚಿಯದೆ ಭ್ರಾಂತಿ
ಯುವಶಕ್ತಿ ಯಿಂದಲೇ ಆಗಬೇಕಿದೆ ಕ್ರಾಂತಿ



ಎಚ್ಚೆತ್ತುಕೊಳ್ಳಲಿ ಸಾಮಾನ್ಯ ಜನತೆ
ಇರಬಹುದು ಇಲ್ಲಿ ತಿಳುವಳಿಕೆ ಕೊರತೆ
ಉಳಿಸಬೇಕಿದೆ ನಮ್ಮ ದೇಶದ ಘನತೆ
ಹಚ್ಚೋಣ ನಾವೆಲ್ಲಾ ಏಕತೆಯ ಹಣತೆ



ಬನ್ನಿರಿ ಎಲ್ಲರು ಇಲ್ಲಿ ಒಂದಾಗೋಣ
ದೇಶ ಕಟ್ಟಲು ನಾವು ಕೈ ಕೈ ಹಿಡಿಯೋಣ
ಜಾತಿ ಮತ ಮರೆತು ಒಂದಾಗಿ ಬೆರೆಯೋಣ
ತಾಯ್ನಾಡ ಏಳಿಗೆಗೆ ಒಟ್ಟಾಗಿ ಶ್ರಮಿಸೋಣ

Thursday, September 9, 2010

ನೋವು ಬೆಳಕಾಗಬೇಕು

ಎಂಜಲೆಲೆಗಳನ್ನು ಬೀದಿಗೆಸೆದಾಗ ಹಲವಾರು ನಾಯಿಗಳು ಮುತ್ತಿಕೊಳ್ಳುತ್ತವೆ. ಬಲಿಷ್ಠ ನಾಯಿಯು ದುರ್ಬಲ ನಾಯಿಗಳನ್ನು ಕಚ್ಚಿ ಓಡಿಸುತ್ತದೆ. ಒಂದುವೇಳೆ ಎಲ್ಲ ನಾಯಿಗಳು ಸಮಬಲವಾಗಿದ್ದರೆ ಹೋರಾಟಕ್ಕಿಳಿಯುತ್ತವೆ.ಬೆಳೆದ ನಾಯಿಗಳ ಮಧ್ಯೆ ಕೃಶವಾಗಿರುವ ಮರಿನಾಯಿಯ ಪಾಡಂತೂ ಹೇಳತೀರದು. ಎಲ್ಲ ನಾಯಿಗಳಿಂದ ಕಚ್ಚಿಸಿಕೊಂಡು ಓಡಿಹೋಗಿ ಬೀದಿಯ ಒಂದು ಬದಿಯಲ್ಲಿ ಕುಳಿತುಕೊಳ್ಳುತ್ತದೆ. ಎಲ್ಲ ನಾಯಿಗಳು ಎಂಜಲೆಲೆಯನ್ನು ನೆಕ್ಕಿ ಹೊರಟುಹೋದ ಮೇಲೆ ಈ ನಾಯಿಮರಿ ಅಳುಕಿನಿಂದ ಮೆಲ್ಲ ಮೆಲ್ಲನೆ ಹೆಜ್ಜೆಯಿಡುತ್ತ ಎಂಜಲೆಲೆ ರಾಶಿ ಹತ್ತಿರ ಹೋಗುತ್ತದೆ. ಆದರೆ ಅಲ್ಲೇನಿದೆ?? ಬರಿ ಎಲೆ ಮಾತ್ರ. ಒಂದು ಅಗುಳೂ ಇಲ್ಲ. ಆದರೂ ಆ ಎಲೆಗಳನ್ನು ನೆಕ್ಕಿ ತೃಪ್ತಿಪಡುತ್ತದೆ. ಇದು ಒಂದುದಿನದ ಕಥೆಯಲ್ಲ. ದಿನ ದಿನವೂ ಅನುಭವಿಸುವ ಗೋಳು. ಹೀಗೆಯೇ ಕೆಲವು ದಿನ ಕಳೆಯುತ್ತದೆ. ಮರಿನಾಯಿ ಬೆಳೆದು ಬಲಿಷ್ಠವಾಗುತ್ತದೆ. ಮುಂಚೆ ಬಲಶಾಲಿಯಾಗಿದ್ದ ನಾಯಿಗಳು ದುರ್ಬಲವಾಗುತ್ತವೆ.ಈಗ ಈ ನಾಯಿಯ ಪ್ರಭುತ್ವ. ಮುದಿನಾಯಿಗಳನ್ನು ಕಚ್ಚಿ ಓಡಿಸುತ್ತದೆ. ಮರಿನಾಯಿಗಳನ್ನು ಹತ್ತಿರ ಸೇರಿಸುವುದೇ ಇಲ್ಲ. ಹಿಂದೊಮ್ಮೆ ತಾನು ಮರಿಯಾಗಿದ್ದಾಗ ಪಟ್ಟ ಬವಣೆಗಳನ್ನು ಅದು ನೆನೆಯುವುದೇ ಇಲ್ಲ. ತನ್ನ ಈ ಪ್ರಾಯ, ಸಾಮರ್ಥ್ಯ ಶಾಶ್ವತವೆಂದೇ ತಿಳಿದು ಕ್ರೂರವಾಗಿ ವರ್ತಿಸುತ್ತದೆ. ಪ್ರಾಣಿ ಪ್ರಪಂಚದಲ್ಲಿ ಇದು ಸಾಮಾನ್ಯ. ಅಲ್ಲಿ ತಪ್ಪು ಒಪ್ಪುಗಳ ಚಿಂತನೆಗೆ ಸ್ಥಳವಿಲ್ಲ.ಪ್ರಾಣಿಗಳಿಗೆ ನ್ಯಾಯ,ನೀತಿ, ಧರ್ಮಗಳ ಸೂತ್ರಗಳು ಅನ್ವಯಿಸುವುದಿಲ್ಲ.
ಇದೆ ಮಾತನ್ನು ನಾವು ಮನುಕುಲದ ಬೇಗೆಗೆ ಹೇಳಲು ಸಾಧ್ಯವಿಲ್ಲ ಏಕೆಂದರೆ ಮಾನವ ಬ್ರಹ್ಮನ ಸರ್ವ ಶ್ರೇಷ್ಠ ಸೃಷ್ಟಿ. ಪ್ರಕೃತಿಯಿಂದ ಸಂಸ್ಕೃತಿಯೆಡೆಗೆ ಸಾಗುತ್ತಿರುವ ವಿಕಾಸ ಜೀವಿ. ಹೀಗೆ ಹೇಳಿಕೊಂಡು ನಮ್ಮ ಭುಜಗಳನ್ನು ತಟ್ಟಿಕೊಳ್ಳಬಹುದು. ಆದರೆ ನಿಜಸ್ಥಿತಿ ಬೇರೆಯೇ ಇದೆ. ನಮ್ಮ ವರ್ತನೆ ಹಲವಾರು ಸಂದರ್ಭಗಳಲ್ಲಿ ನಾಯಿಯ ನಡತೆಗಿಂತ ಹೀನವಾಗಿರುತ್ತದೆ.ಸೊಸೆಯಾಗಿದ್ದಾಗ ಕಣ್ಣೀರಲ್ಲಿ ಕೈ ತೊಳೆಯುವ ಹೆಣ್ಣು ಅತ್ತೆಯ ಪಟ್ಟಕ್ಕೆ ಬಂದಾಗ ತನ್ನ ಸೊಸೆಗೆ ಇಲ್ಲದ ಕಿರುಕುಳ ಕೊಡುತ್ತಾಳೆ. ಶೂದ್ರಾತಿ ಶೂದ್ರನಾಗಿದ್ದವನು ಇನ್ನೊಂದು ಜಾತಿಗೆ ಮತಾಂತರಗೊಂಡಾಗ ತಾನು ಬಿಟ್ಟು ಬಂದ ಜಾತಿಯವರನ್ನು ಹೀಯಾಳಿಸುತ್ತಾನೆ. ಚುನಾವಣೆಗಳಲ್ಲಿ ಸೋತು ಕೊರಗಿಹೊಗಿದ್ದ ವ್ಯಕ್ತಿಯೊಬ್ಬನು ಅದೃಷ್ಟವಶದಿಂದ ಪಟ್ಟಕ್ಕೆ ಬಂದಾಗ ಸೋತ ಅಭ್ಯರ್ಥಿಯೆದುರು ಮೀಸೆ ತಿರುವುತ್ತಾನೆ.
 
ದಿನ ದಿನವೂ ಹೊಡೆತ ಬಡಿತದಲ್ಲೇ ಕಾಲ ನೂಕಿದ ಬಾಲಕಾರ್ಮಿಕರು ತಾವು ಬೆಳೆದು ದೊಡ್ಡವರಾದ ಮೇಲೆ ಬಾಲ ಕಾರ್ಮಿಕರನ್ನು ದಂಡಿಸುತ್ತಾರೆ. ಗುಲಾಮನು ಒಡೆಯನಾದ ಮೇಲೆ ಇತರರನ್ನು ಗುಲಾಮನಂತೆ ಕಾಣುತ್ತಾನೆ. ಕುರುಡನಿಗೆ ಪಟ್ಟ ಕಟ್ಟಿದರೆ ಅವನು ಇತರರ ಕಣ್ಣು ಕೀಳಿಸುತ್ತಾನೆ. ನಾವು ಏಕೆ ಹೀಗೆ ಮಾಡುತ್ತೇವೆ? ಇದಕ್ಕೆ ಏನು ಕಾರಣ? ನಾವು ಹಿಂದೆ ಅನುಭವಿಸಿದ ಕಷ್ಟಗಳೇ ಮುಂದೆ ಸೇಡಾಗಿ ರೂಪುಗೊಳ್ಳುವುದೇ ಇದಕ್ಕೆ ಕಾರಣ. ಇದು ತಪ್ಪು. ನಾವು ಪಟ್ಟ ಕಷ್ಟಗಳಿಂದ ನಮ್ಮ ಹೃದಯ ಪಕ್ವವಾಗಬೇಕು., ಮೃದುವಾಗಬೇಕು, ಮಾಗಿದ ಹಣ್ಣಾಗಬೇಕು. ಆಗ ನಾವುಂಡ ನೋವು ನಮಗೆ ಬೆಳಕಾಗುತ್ತದೆ. ಈ ಬೆಳೆಕಿನಿಂದ ಇತರರ ಬದುಕನ್ನು ಬೆಳಗಿಸಬಹುದು. ಇಲ್ಲದಿದ್ದರೆ ನಾವು ನಾಯಿಗಿಂತ ಕಡೆ.

Sunday, July 25, 2010

ಮಳೆ


ಬಾನದು ನೋಡ
ಕವಿದಿದೆ ಮೋಡ
ಕತ್ತಲು ಗಾಢ
ಹೊರ ಬರಬೇಡ



ಗುಡುಗಿದೆ ಮುಗಿಲು
ಬಡಿದಿದೆ ಸಿಡಿಲು
ಮಡುಗಿದೆ ಕಡಲು
ನಡುಗಿದೆ ಒಡಲು


ಬರ ಬರ ಮಳೆಯು
ಥರ ಥರ ಚಳಿಯು
ಚಿಗುರಿದೆ ಬೆಳೆಯು
ಕರಗಿದೆ ಇಳೆಯು


ರೌದ್ರವ ತಾಳಿ
ಬೀಸಿದೆ ಗಾಳಿ
ಹೆದರಿದೆ ಕಂಡು
ಪ್ರಾಣಿಯ ದಂಡು


ತಣಿದಿದೆ ಭುಗಿಲು
ಕುಣಿದಿದೆ ನವಿಲು
ನಿಂತಿದೆ ಮಳೆಯು
ತುಂಬಿದೆ ಹೊಳೆಯು

Friday, May 21, 2010

ನೆನಪಾಗುತಿವೆ ಗೆಳತಿ ಆ ದಿನಗಳು

 


ನೆನಪಾಗುತಿವೆ ಗೆಳತಿ ಆ ದಿನಗಳು
ನಿನ್ನೊಡನೆ ನಾ ಕಳೆದ ಆ ಕ್ಷಣಗಳು
ಜೊತೆಯಲ್ಲಿ ಕಂಡ ಸವಿಗನಸುಗಳು
ನನಸಾಗದೆ ಹೋದ ಬರಿ ನೆನಪುಗಳು

ನನ್ನೆದೆಯ ತುಂಬಾ ಪ್ರೇಮಸುಧೆ ತುಂಬಿಸಿದೆ
ಸುತ್ತ ಮುತ್ತಲು ಮರೆತು ನೀ ನನ್ನ ಚುಂಬಿಸಿದೆ
ನಿನ್ನ ಪ್ರೇಮದಿ ಕೆಡೆದೆ, ಜೇನ ಹೊಳೆಯನೆ ಸುರಿದೆ
ಹೊತ್ತು ವೇಳೆಯ ಮರೆತೆ, ಭವದ ಚಿಂತೆಯ ತೊರೆದೆ


ನಿನ್ನೊಂದಿಗೆ ನಾ ಕಳೆದ ಆ ಮಧುರ ಕ್ಷಣಗಳು
ನನ್ನ ಬದುಕಲಿ ಸದಾ ಹೊಳೆಯುವ ನಕ್ಷತ್ರಗಳು
ನಿನ್ನ ಪ್ರೀತಿಯಲಿ ಮೈ ಮರೆತ ದಿನಗಳು
ನನ್ನ ಬದುಕಿನ ಹುಣ್ಣಿಮೆ ಯ ದಿನಗಳು


ಕದ್ದು ಕದ್ದು ನೋಡುತಿದ್ದ ಆ ನಿನ್ನ ಕಣ್ಣೋಟ
ನಕ್ಕಾಗ ದಂತ ಪಂಕ್ತಿಗಳ ಇಣುಕು ನೋಟ
ಮರೆಯಲಾಗುವುದೇ ಹೃದಯಗಳ ಒಡನಾಟ
ನೀ ನನ್ನ ಮರೆತೇ, ನಾ ಕಲಿತೆ ಪಾಠ .....


ನಿನ್ನ ಗೇಳಿನಲಿ ನನ್ನೇ ನಾ ಮರೆತಿದ್ದೆ
ನನ್ನಲ್ಲಿ ನಿನ್ನ ಬಿಂಬವ ನೋಡಿದ್ದೆ
ಮನದಲ್ಲಿ ಹೊಸ ಆಸೆಗಳ ಚಿಗುರಿಸಿದೆ
ನಿನ್ನದೇ ಕೈಯಾರೆ ಅವುಗಳ ಕಮರಿಸಿದೆ


ನೀ ಪಕ್ಕ ಕುಳಿತು ಆಡಿದ್ದ ಪಿಸುಮಾತು
ಎದೆಯೊಳಗೆ ಹೊಕ್ಕಿ ಉಸಿರಾಗಿ ಕೂತಿದೆ
ನಿನ್ನ ಅಗಲಿಕೆಯ ವಿರಹದ ನೋವು
ಜಂತುವಾಗಿ ಕಡಿದು ರಕ್ತ ಹೀರುತಿದೆ


ನಾ ಹೇಗೆ ಮರೆಯಲಿ ಆ ಕೊನೆಯ ದಿನವ
ನೀ ನಿಲ್ಲಿಸಿ ಹೊರಟಿದ್ದೆ ನನ್ನ ಎದೆ ಬಡಿತವ
ನೀ ಸರಿದು ಹೋದ ಎಷ್ಟೋ ತಾಸಿನವರೆಗೂ
ಶಿಲೆಯಾಗಿ ಕುಳಿತಿದ್ದೆ ದೂಷಿಸುತ ಹಣೆಬರಹವ.....

Sunday, May 9, 2010

ಅಮ್ಮ

ಅಮ್ಮನ ಬಗ್ಗೆ ಎಷ್ಟು ಬರೆದರೂ ಕಡಿಮೆ.....ಅಮ್ಮನ ದಿನವಾದ ಇಂದು ಅಮ್ಮನಿಗಾಗಿ ಈ ಕೆಲವು ಸಾಲುಗಳು...



ನವಮಾಸ ನಮ್ಮ ಭಾರವನು ಹೊತ್ತು
ಪ್ರಸವ ವೇದನೆ ಸಹಿಸಿ ಜನ್ಮವನು ಇತ್ತು
ಕೊಟ್ಟವಳು ನಮಗೆ ವಾತ್ಸಲ್ಯದ ಮುತ್ತು
ಬೆಳೆಸಿದಳು ಪ್ರೀತಿಯ ತುತ್ತನ್ನು ಇತ್ತು .


ಪದರ ಪದರವಾಗಿ ಮಾತು ಕಲಿಸಿದಳು
ಮೊದಲ ಗುರುವಾಗಿ ಪಾಠ ಕಲಿಸಿದಳು
ತನ್ನ ನೋವನು ಮರೆತು ಎದೆಹಾಲು ಕುಡಿಸಿದಳು
ಬೆಚ್ಚನೆ ಅಪ್ಪುಗೆಯಲಿ ಭಯವ ಮರೆಸಿದಳು


ತಪ್ಪು ಮಾಡಲು ನಾವು ಒಮ್ಮೊಮ್ಮೆ ಹೊಡೆಯುವಳು
ಮತ್ತೆ ಮನನೊಂದು ಮನದಲ್ಲೇ ಅಳುವವಳು
ಮಕ್ಕಳ ಸುಖಕಾಗಿ ಜೀವ ತೇದುವಳು
ತಾ ಗುಟುಕು ಸುಖದಲ್ಲೇ ತೃಪ್ತಿ ಹೊಂದುವಳು


ಕಣ್ಣಿಗೆ ಕಾಣುವ ಏಕೈಕ ದೇವತೆ ಇವಳು
ಹೋದ ಕಡೆಯಲ್ಲೆಲ್ಲಾ ಕೊಡುವಳು ನೆರಳು
ಜೋಗುಳವ ಹಾಡಿ ನಿದ್ದೆ ಬರಿಸುವಳು
ನೋವಿನ ಕಂತೆ ಕಂತೆ ಸಹಿಸುವಳು

ಏನು ಬರೆದರೂ ಕಡಿಮೆ ಅಮ್ಮನ ಬಗೆಗೆ
ಸರಿಸಾಟಿ ಯಾರಿಲ್ಲ ಜಗದಲ್ಲಿ ಇವಳಿಗೆ.
'ಅಮ್ಮ' ನು ದೇವರ ಅಮೂಲ್ಯವಾದ ಕೊಡುಗೆ
ತಿವಿಯದಿರಿ ಮಕ್ಕಳೇ ಹಾಲುಣಿಸಿದ ಎದೆಗೆ......

Happy Mother's Day........

Monday, March 8, 2010

ಹೊಸಬೆಳಕು



ಜೀವನವೆಂಬ ಜಟಿಲ ಸರಪಳಿಯಲ್ಲಿ
ಬಂದಿಯಾಗಿ ವಿಮೋಚನೆಗೆಂದು
ಬಿಕ್ಕುತ್ತಿರುವೆ ನಾನು


ಬೆಟ್ಟದಂತಿರುವ ಕಷ್ಟಗಳೆಡೆಯಲ್ಲಿ
ಸಿಕ್ಕಿ, ಮೇಲೆ ಬರಲೆಂದು
ಹೆಣಗಾಡುತ್ತಿರುವೆ ನಾನು

ಸೂತ್ರವಿಲ್ಲದ ಬಾಳಿನಲ್ಲಿ
ದಿಕ್ಕೆಟ್ಟು, ಗಾಳಿಪಟದಂತೆ
ಅಲ್ಲಿಲ್ಲಿ ಸುತ್ತುತ್ತಿರುವೆ ನಾನು


ಕೈಗಳಲ್ಲಿ ಕಸುವಿಲ್ಲದೆ
ತನ್ನವರ ಆಸರೆಯಿಲ್ಲದೆ
ಮರಳಿನರಮನೆಯಲ್ಲಿ ವಾಸವಾಗಿರುವೆ ನಾನು


ಪ್ರೀತಿಗಾಗಿ ಮನವ ಸವೆಸಿ
ಬುದ್ದಿ ವಿಭ್ರಣೆ ಮಾಡಿಕೊಂಡು
ಕಣ್ಣೀರಲ್ಲಿ ತೊಳಲಾಡುತ್ತಿರುವೆ ನಾನು


ಸಂಸಾರದ ಭಾರದಲ್ಲಿ ಕುಸಿದು
ಕಷ್ಟಗಳ ಕಹಿ ಬೇವ ಕುಡಿದು
ಅಳು ನುಂಗಿ ನಗುತ್ತಿರುವೆ ನಾನು


ಮನಸದು ಕೆಟ್ಟು ಹೋಗಿ
ಕನಸುಗಳು ವಿಕಾರವಾಗಿ
ದುಸ್ವಪ್ನದ ನಿದ್ರೆಯಲ್ಲಿ ಸಾಯುತ್ತಿರುವೆ ನಾನು


ಹರಿವ ನೀರಿನಲ್ಲಿ, ಕೊಳೆತ ಕೆಸರಿನಲ್ಲಿ
ಚಡಪಡಿಸುವ ಮೀನಿನಂತೆ
ಕಷ್ಟಪಟ್ಟು ಜೀವಿಸುತ್ತಿರುವೆ ನಾನು


ಬದುಕಿನ ಜಂಜಾಟವ ದೂರ ಮಾಡಿ
ಮನಕೆ ತಂಪೆರೆಯುವ
ಹೊಸಬೆಳಕಿಗಾಗಿ ಕಾಯುತ್ತಿರುವೆ ನಾನು.......

Sunday, February 21, 2010

ನನ್ನಾಕೆ

ಈ ಕವನ ನನ್ನ ಪ್ರೀತಿಯ ಪತ್ನಿಗೆ ಅರ್ಪಿತ.....I LOVE U VINU......


ಪ್ರೀತಿಯೆಂಬ ತೈಲವು ಬತ್ತಿ
ನಾ ಆರಿ ಹೋಗುತಿದ್ದೆ ದೀಪದಂತೆ
ನಿನ್ನ ಪ್ರೀತಿಯು ವರವಾಯ್ತು
ಮರುಭೂಮಿಯಲ್ಲಿ ಓಯಸ್ಸಿಸ್ಸಂತೆ


ಒಲವಿನ ಜಲವದು ಬತ್ತಿ
ಎಲೆ ಕಳಚಿಕೊಂಡಿದ್ದೆ ಮರದಂತೆ
ನೀ ಚಿಗುರಿಸಿದೆ ಬಾಳನ್ನು
ಮುಂಗಾರಿನ ಮಳೆಯಂತೆ




ಪ್ರೀತಿಯ ಆಧಾರವು ಉರುಳಿ
ನೆಲಕ್ಕೊರಗಿದ್ದೆ ಬಳ್ಳಿಯಂತೆ
ನೀ ನಿಂತೆ ಜೊತೆಯಲ್ಲಿ
ಒಂದು ಹೆಮ್ಮರದಂತೆ

ಸಾವಿನತ್ತ ಮುಖ ಮಾಡಿದ್ದೆ
ಜೀವನದಲ್ಲಿ ಜಿಗುಪ್ಸೆ ಗೊಂಡವನಂತೆ
ನೀ ಬಂದೆ ಬಾಳಲ್ಲಿ
ದಿವ್ಯ ಸಂಜೀವಿನಿಯಂತೆ








 

Friday, February 5, 2010

ನೀ ಮರಳಿ ಬಾ ............












ನನ್ನೇ ಕಾಯುತಿದ್ದ
ಆ ನಿನ್ನ ಕಂಗಳು
ಯಾರನ್ನೋ ಹುಡುಕುತಿವೆ
ಕಳೆದಿವೆ ಕೆಲ ತಿಂಗಳು

ನಾ ಚುಂಬಿಸಿದ್ದ
ಆ ನಿನ್ನ ತುಟಿಗಳು
ಮಧುವಿಲ್ಲದೆ ಒಣಗಿವೆ
ಹಳಸಿದಂತೆ ತಂಗಳು

ನಾ ಆಡುತಿದ್ದ
ಆ ನಿನ್ನ ಬೆರಳುಗಳು
ಯಾರನ್ನೋ ಹಿಡಿದಿವೆ
ಕಾಣದಂತೆ ಕೈಗಳು

ನೀ ಕೊಟ್ಟ ಆ ಮುತ್ತು
ಇನ್ನೂ ಹಸಿಯಾಗಿದೆ
ನೀನಾಡಿದ ಮಾತು
ಮಾತ್ರ ಹುಸಿಯಾಗಿದೆ

ನಿನ್ನನ್ನು ಮೆಚ್ಚಿಯೇ
ನಾ ಪ್ರೀತಿ ಮಾಡಿದೆ
ಏಕೆಂದು ತಿಳಿದಿಲ್ಲ
ನೀ ಮೋಸ ಮಾಡಿದೆ

ನನ್ನೆಲ್ಲಾ ಸುಖವನ್ನು
ನಿನ್ನಲ್ಲಿ ನೋಡಿದೆ
ನೀನೀಗ ಬೇರೆಯವರ
ಹಿಂದೆ ಹಿಂದೆ ಓಡಿದೆ

ಭಾವನೆಗಳು ಬತ್ತಿವೆ
ನನ್ನ ಬದುಕಿನಲ್ಲಿ
ಆದರೂ ಒಂದಾಸೆ
ಮನದ ಮೂಲೆಯಲ್ಲಿ

ಕೂಗಿ ಕರೆಯಲಾರೆ
ನನ್ನಲ್ಲಿ ದನಿಯಿಲ್ಲ
ನಾ ಕಾಯ ಬಲ್ಲೆನು
ಸಮಯದ ಮಿತಿಯಿಲ್ಲ

ಹೆಣ್ಣುಗಳು ಸಾಲಾಗಿ
ಕಾದಿಹರು ನನಗೆ
ಕಣ್ಣುಗಳು ಕಾಯುತಿವೆ
ನಿನ್ನ ಬರುವಿಕೆಗೆ ...

ಕಾದ ಹೆಂಚಿನ ಮೇಲೆ
ನೀರ ಹನಿ ಉಳಿಯೊಲ್ಲ
ನಿನ್ನನ್ನು ನಾ ಬಿಟ್ಟು
ಬಹುಕಾಲ ಬದುಕೊಲ್ಲ

Thursday, February 4, 2010

ವರದಕ್ಷಿಣೆ


ಮದುವೆ ಆಗದ ಮಗಳಿದ್ದರೆ ಹೆತ್ತವರ ಮನಕೆ ಹೊರೆ
ಬೇಗ ಕೈ ತೊಳೆಯುವಾಸೆ ಎರೆದು ಕೊಟ್ಟು ಧಾರೆ
ಹಸನಾಗಿರಬೇಕೆಂದು ತಮ್ಮ ಮಗಳ ಬಾಳು
ವರದಕ್ಷಿಣೆ ಹಣ ಕೊಡಲು ಪಡುವರದೆಷ್ಟು ಗೋಳು

ಹೊಲಗದ್ದೆಗಳ ಮಾರಿ ಕೂಲಿ ಮಾಡುವರು
ಮನೆ ಮಠಗಳ ಮಾರಿ ಆಗಿ ನಿರ್ಗತಿಕರು
ತಮ್ಮನ್ನೇ ತಾವಾಗಿ ಅಡವಿಟ್ಟು ಕೊಂಡರು
ಎಲ್ಲಾ ಕಷ್ಟಗಳ ನಗು-ನಗುತಾ ಸಹಿಸಿಕೊಂಡರು

ಹಣದ ಜೊತೆ ಬೇಡುವರು ಮೋಟಾರು ಗಾಡಿ
ಸ್ವತಹ ಖರೀದಿಸಲು ಇವರಿಗೇನು ದಾಡಿ ???
ಇವರಿಗೆ ಕೊಡಬೇಕಂತೆ ವಾಚು ಉಂಗುರ
ಯಾಕೆ ಬೇಕು ಭಂಢರಿಗೆ ಈ ಆಢ೦ಭರ ???

ದುಡಿಯಲಾಗದಿದ್ದರೂ ಇವರಿಗೆ ಬಿಡಿಗಾಸು
ಬೇಕಂತೆ ಕೈ ತುಂಬಾ ಸಂಬಳದ ಹೆಂಗಸು
ಇವರ ಮನದಲ್ಲಿದ್ದರೂ ಅದೆಷ್ಟೋ ಹೊಲಸು
ಅವಳಿಗಿರಬೇಕಂತೆ ಶುಚಿಯಾದ ಮನಸು

ಮದುವೆ ಆದ ಮೇಲೂ ನಿಲ್ಲದು ಬೇಡಿಕೆ
ಆಗೊಮ್ಮೆ ಈಗೊಮ್ಮೆ ಹೊಸ ಹೊಸ ಬೆದರಿಕೆ
ಇಂಥ ಅಧಮರಿಗೂ ಮದುವೆ ಬೇಕಾ ????
ಇವರ ಜನ್ಮಕಿಷ್ಟು ಬೆಂಕಿ ಹಾಕ.............

ಕಷ್ಟಗಳ ಸಹಿಸಿ ದೇಹ ಆಗಿದ್ದರೂ ಹುಣ್ಣು
ಮರ್ಯಾದೆಗೊಸ್ಕರ ಹೆಣಗಾಡುವಳು ಹೆಣ್ಣು
ಸೀಮೆಎಣ್ಣೆ ಸುರಿದು ಹಾಕುವರು ಕೊಂದು
ತೋರಿಸುವರು ಜಗಕೆ ಆತ್ಮಹತ್ಯೆ ಎಂದು

ಆಗಿಹುದು ಇದೂ ಒಂದು ಸಾಮಾಜಿಕ ಪಿಡುಗು
ಮುಳುಗುತಿದೆ ಮಹಿಳೆಯರ ಸಮಾನತೆಯ ಹಡಗು
ಮಹಿಳೆಯರೆ ನೀವೇ ಈ ಸಮಸ್ಯೆಯ ಬಿಡಿಸಿ
ವರದಕ್ಷಿಣೆಯ ಹೊರ ಹಾಕಿ ಕಸದಂತೆ ಗುಡಿಸಿ !!!!!

Tuesday, February 2, 2010

ದಲಿತನ ಸ್ನೇಹ



ಇದೊಂದು ಕವನವಲ್ಲ....ನಿಜ ಕಥೆ.....ಕೋಲ್ಕತ್ತಾ ದಲ್ಲಿದ್ದ ನನ್ನ ದಲಿತ ಸ್ನೇಹಿತನೊಬ್ಬನ ನೋವಿನ ಕಥೆ...ಉಚ್ಹ ಜಾತಿಯವರ ಮನೆಯಲ್ಲಿ ಆತನ ಅಮ್ಮ ಮನೆ ಕೆಲಸ ಮಾಡಿ ಕೊಂಡಿದ್ದರು...ಅವರ ಮನೆಯ ಕೊಟ್ಟಿಗೆ ಯಲ್ಲಿ ಇವರ ವಾಸ...ಆ ಮನೆಯ ಯಜಮಾನನ ಮಗಳು ಈತನ ಸ್ನೇಹಿತೆ.........




ಜೊತೆಯಲ್ಲಿ ಕೂಡಿ-ಆಡಿ ಬೆಳೆದವರು ನಾವು
ಜೊತೆಯಲ್ಲಿ ದಿನ-ರಾತ್ರಿ ಕಳೆದವರು ನಾವು
ಜೊತೆಯಲ್ಲಿ ಕಷ್ಟ-ಸುಖ ಕಂಡವರು ನಾವು
ಜೊತೆಯಿಲ್ಲಾ ನಾವಿಂದು ಎನ್ನುವುದೇ ನೋವು !!!!.

ಕಲ್ಮಶವಿಲ್ಲದೇ ಪವಿತ್ರ-ವಾಗಿತ್ತು ಸ್ನೇಹ
ಉಸಿರೊಂದು ಆಗಿ ಎರಡಾಗಿತ್ತು ದೇಹ
ಅಲ್ಲಿ ಇರಲಿಲ್ಲ ಪ್ರೇಮ-ಕಾಮಗಳ ವ್ಯಾಮೋಹ
ಆದರೂ ಬಂದಿತ್ತು ಕೆಟ್ಟ ಜನಕೆ ಸಂದೇಹ !!!!!

ಆಕೆಯೋ ಆಗರ್ಭ ಶ್ರೀಮಂತರ ಮಗಳು
ನಾ-ನಿಂತೆ ಕಡು ಬಡವ, ಜಾತಿಯಲಿ ಕೀಳು
ಅಸಹ್ಯ ಪಡುವರು ಅವರು ಕಂಡರೂ ನನ್ನ ನೆರಳು
ಹೇಳಿದರು ನನಗಂದು 'ಊರು ಬಿಟ್ಟು ತೆರಳು' !!!!!

 ಮನಸಲ್ಲಿ ಯಾವುದೋ ನಿರ್ಧಾರವ ತೊಟ್ಟು
ಹೋಗಿಲ್ಲ ನಾನು ಊರನ್ನು ಬಿಟ್ಟು
ನನ್ನ ನಡೆ ಅವ್ರಿಗೆ ತರಿಸಿತ್ತು ಸಿಟ್ಟು
ಕೈ ಕಾಲು ಮುರಿಸಿದರು ರೌಡಿಗಳ ಬಿಟ್ಟು !!!!!

ಗೆಳೆತನಕೆ ಉಂಟೆ ಹೆಣ್ಣು- ಗಂಡಿನ ಭೇಧ ??
ಗೆಳೆತನಕೆ ಉಂಟೆ ಮೇಲು- ಕೀಳಿನ ವಾದ ?
ಅಂತರವು ಎಲ್ಲುಂಟು ಬಡವನೋ-ಬಲ್ಲಿದ ?
ಎಲ್ಲಿ ಮಾಡಲಿ ನಾನು ನಿಜ ಸ್ನೇಹದ ಶೋಧ ???