Thursday, September 13, 2012

ಮುಂಬೈ ಡೈರಿ- ನೆನಪಿನಾಳದಿಂದ -1


ನಾನು ಎಂದಿನಂತೆ  ಅಂಧೇರಿ ರೈಲು ನಿಲ್ದಾಣದಲ್ಲಿ ನೂಕು ನುಗ್ಗಲಿನ ನಡುವೆ  ಹೇಗೋ ಹರಸಾಹಸ ಮಾಡಿ ಚುರ್ಚ್ ಗೇಟ್ ಗೆ ಹೋಗುವ ರೈಲಿನಲ್ಲಿ ಸೀಟು ಗಿಟ್ಟಿಸಿಕೊಂಡು  ಕುಳಿತುಕೊಂಡಿದ್ದೆ. ಮುಂಬಯಿಯಲ್ಲಿ ಬೆಳಿಗ್ಗಿನ ಅವಧಿಯಲ್ಲಿ ಲೋಕಲ್ ರೈಲಿನಲ್ಲಿ ಸೀಟು ಹಿಡಿಯುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ಅದು ಎಲ್ಲರಿಗೂ ಆಗುವ ಕೆಲಸವೂ ಅಲ್ಲ....ಅದಕ್ಕೂ ಅನುಭವ ಬೇಕು....೧೫ ವರುಷಗಳಿಂದ ಮುಂಬಯಿ ಲೋಕಲ್ ರೈಲಿನಲ್ಲಿ ಪ್ರಯಾಣ ಮಾಡುತ್ತಿರುವ ಅನುಭವವೇ ನನಗೆ ಸೀಟು ಗಿಟ್ಟಿಸಿಕೊಳ್ಳುವಲ್ಲಿ ನೆರವು ಮಾಡಿದ್ದು. ರೈಲಿನಲ್ಲಿ ನಮ್ಮ ಕಚೇರಿ ತಲುಪಲು ೪೦ ನಿಮಿಷ ಬೇಕಾಗುವುದರಿಂದ  'ಉದಯವಾಣಿ' ದಿನಪತ್ರಿಕೆಯ  ಎಲ್ಲಾ ಪುಟಗಳ ಇಂಚು ಇಂಚು ಬಿಡದೇ ಓದುವುದಕ್ಕೆ ಆ ಸಮಯವನ್ನು ಬಳಸಿಕೊಳ್ಳುತಿದ್ದೆ. ಹೀಗೆ ಪತ್ರಿಕೆ ಓದುತಿದ್ದಾಗ ಜನರ  ನುಗ್ಗಾಟದ   ನಡುವೆ ಹೇಗೋ ಹೇಗೋ ಒದ್ದಾಡಿಕೊಂಡು ನಾನಿರುವ ಸೀಟಿನ ಬಳಿ ಬರುತ್ತಿರುವ ಒಬ್ಬರು ೬೦-೭೦ ರ ಹರೆಯದ ವ್ಯಕ್ತಿಯೊಬ್ಬರು ನನ್ನ ಕಣ್ಣಿಗೆ ಬಿದ್ದರು. ಕುಳಿತಿರುವ ಮಹಾನುಭಾವರುಗಳು ಯಾರೂ ಅವರ ಬಗ್ಗೆ ಗಮನ ಹರಿಸಲೇ ಇಲ್ಲ, ಅಥವಾ ಕಂಡರೂ ಕಾಣದ ಹಾಗೆ ಇದ್ದರೂ ಎನ್ನಬಹುದು. ಮುಂಬೈ ಮಹಾನಗರಿಯ ಬಸ್ಸಿನಲ್ಲಿ, ರೈಲಿನಲ್ಲಿ ಓಡಾಡುವಾಗ ವಯಸ್ಸಾದವರು, ಮಹಿಳೆಯರು ಎಂದು ಅವರಿಗೆ ತಮ್ಮ ಸೀಟನ್ನು ಬಿಟ್ಟು  ಕೊಡುವುದನ್ನು   ನಾನು ನೋಡಿದ್ದು ತುಂಬಾ ವಿರಳ. ನಾನು ಆ ವ್ಯಕ್ತಿಯ ವಯಸ್ಸಿಗೆ ಬೆಲೆ ಕೊಟ್ಟು ಅವರು ಕುಳಿತುಕೊಳ್ಳಲಿ ಎನ್ನುವ ಉದ್ದೇಶದಿಂದ ಅವರಿಗೆ ಸನ್ನೆ ಮಾಡಿ ಎದ್ದು ನಿಂತೆ. ತಕ್ಷಣ ಅಲ್ಲೇ ನಿಂತಿದ್ದ ೨೦-೨೪ ರ ವಯಸ್ಸಿನ ತರುಣ ಆ ಸೀಟಿನಲ್ಲಿ ಧೊಪ್ಪೆಂದು ಕುಳಿತುಕೊಂಡೇ ಬಿಟ್ಟ. ನಾನು ಆ ಯುವಕನನ್ನು ಕುರಿತು   'ಅರೆ ಭಾಯ್ಸಾಬ್  ಮೈ ವೋ ಅಂಕಲ್ ಕೇಲಿಯೆ ಸೀಟ್ ಚೋಡಾ ತಾ...ಉನಕೋ ಬೈಟ್ನೇ ದೋ' (ಸಹೋದರ, ನಾನು ಆ ಅಂಕಲ್ ಗೆಂದು ಸೀಟು ಬಿಟ್ಟಿದ್ದು, ಅವ್ರಿಗೆ ಕುಳಿತುಕೊಳ್ಳಲು ಬಿಡು)  ಎಂದು ಹೇಳಿದೆ. ಆಗ ಆತ ಸಿಟ್ಟಿನಲ್ಲಿ  'ಸೀಟ್ ಕೆ ಊಪರ್  ಕಿಸೀಕಾ ನಾಮ್ ಲಿಖಾ ನಹಿ ಹೈ' (ಸೀಟ್ ಮೇಲೆ ಯಾರ ಹೆಸರು ಬರೆದಿಲ್ಲ)  ಎಂದುಬಿಟ್ಟ. ನಾನು  'ವೋ ತೋ ಮುಜ್ಹೆ ಭಿ ಪತಾ ಹೈ....ಏಜ್ಡ್ ಆದ್ಮಿ ಹೈ ...ಉನಕೋ ಬೈಟ್ ನೇ ದೋ....ನಹಿನ್ ತೋ ಮೈ ಸೀಟ್ ಕ್ಯೋo ಚೋಡ್ತಾ" ( ಅದು ನನಗೂ ಗೊತ್ತು....ಅವರು ವಯಸ್ಸಾದವರು ಅವರು ಕುಳಿತುಕೊಳ್ಳಲಿ ...ಇಲ್ಲದಿದ್ದರೆ ನಾನ್ಯಾಕೆ ಸೀಟು ಬಿಡ್ತಾ ಇದ್ದೆ) ಎಂದೆ. ನಾನು ಆ ಯುವಕನಲ್ಲಿ  ಆ ವ್ಯಕ್ತಿ ಗಾಗಿ ಇಷ್ಟೆಲ್ಲಾ ಜಗಳ ಮಾಡುತ್ತಾ ಇದ್ದರೂ  ಅಲ್ಲಿ ಕುಳಿತ ಉಳಿದವರಾರೂ ಈ ಬಗ್ಗೆ ಏನೂ ಮಾತಾಡಲೇ ಇಲ್ಲ. [ರಸ್ತೆಯ ಮೇಲೆ  ಗರ್ಭಿಣಿ ಹೆಂಗಸೊಬ್ಬಳನ್ನು ೩-೪ ಜನ ಸೇರಿ ಕ್ಷುಲ್ಲಕ ಕಾರಣಕ್ಕಾಗಿ ಥಳಿಸುತಿದ್ದರೂ ಸುಮ್ಮನೆ ನೋಡುತ್ತಾ ಆ ಮಹಿಳೆಯ ಸಹಾಯಕ್ಕೆ ಧಾವಿಸದ  ಜನರೇ ಇಲ್ಲಿರುವಾಗ ಇದೇನು ಮಹಾ ಅಲ್ಲಾ ಬಿಡಿ] . ಆದರೂ ಅಲ್ಲಿಗೆ ಬಿಟ್ಟು ಬಿಡುವ ಮನಸ್ಸು ನನಗೆ ಬರಲಿಲ್ಲ. ಆ ಯುವಕ ನಾನು ಹೇಳಿದ ಮಾತಿಗೆ ಪ್ರತಿಯಾಗಿ  'ಯೆ ತೇರ ಬಾಪ್ ಕ ಸೀಟ್ ನಹಿ ಹೈ'  ಎಂದುಬಿಟ್ಟ.  ನನಗೆ ಸಿಟ್ಟು ಬರುವುದು ಬಹಳ ಕಡಿಮೆ...ಅಪರೂಪಕ್ಕೆ ಎಲ್ಲಾದರೂ ಸಿಟ್ಟು ಬಂತೆಂದರೆ ನಾನೇನು ಮಾಡುತ್ತೇನೋ  ನನಗೂ ತಿಳಿಯದ ಹಾಗೆ ವರ್ತಿಸುವ ಸ್ವಭಾವ ನನ್ನದು. ಕೋಪದ ಬರದಲ್ಲಿ ಗೋಡೆಗೆ ಗುದ್ದುವುದು, ಟಿ.ವಿ. ರಿಮೋಟ್ ನ್ನು ನೆಲಕ್ಕೆ ಬಡಿಯುವುದು ಹೀಗೆಲ್ಲಾ ಮಾಡಿದ್ದೂ ಉಂಟು. ಇಲ್ಲಿ ಆಗಿದ್ದು ಹಾಗೆ ...ಮುಂಬೈ ನಲ್ಲಿ  'ಮಾ' ಕ  'ಬೆಹನ್'  ಕ , 'ಬಾಪ್ 'ಕ   ಇಂತಹ ಬೈಗುಳ ಗಳನ್ನು [ಅವರಿಗೆ ಅದು ಬೈಗುಳ ಅನ್ನಿಸೋದೇ ಇಲ್ಲ] ಉಪಯೋಗಿಸದೆ ಮಾತಾಡುವುದು ತುಂಬಾ ವಿರಳ....ಅವುಗಳನ್ನು ಪ್ರಯೋಗಿಸದೆ  ಮಾತಾಡಿದರೆ ಆ  ಮಾತಿಗೆ ಬೆಲೆ ಇರೋಲ್ಲವೆನ್ನುವಂತೆ ಮಾತಾಡುತ್ತಾರೆ.  ಚಿಕ್ಕ ಚಿಕ್ಕ ಮಕ್ಕಳು  ಕೂಡ ಆಟ ಆಡುವಾಗ ಈ ಬೈಗುಳಗಳನ್ನು ಬಳಸುವುದು ಸಾಮಾನ್ಯವಾಗಿ ಬಿಟ್ಟಿದೆ.  ಆದರೆ ನನಗೆ ಅಂತಹ  ಶಬ್ಧ ಗಳನ್ನು ಬಳಸುವುದು ಹಾಗೂ ಕೇಳುವುದು ಸಹ ಇಷ್ಟವಾಗದ ಕಾರಣ ಅವನು ಹೇಳಿದ  'ಬಾಪ್ ಕ' ಎನ್ನುವ ಶಬ್ಧ  ಕೆರಳುವಂತೆ ಮಾಡಿತ್ತು.    ಆತ ಮಾತಾಡಿ ಬಾಯಿ ಮುಚ್ಚುವಷ್ಟರಲ್ಲಿ ನನ್ನ ಬಲಗೈ ಆತನ ಕೆನ್ನೆಗೆ ಬಲವಾಗಿ ಬಿದ್ದಿತ್ತು. ನನ್ನಿಂದ ಇದನ್ನು ನಿರೀಕ್ಷಿಸದಿದ್ದ ಆ ಯುವಕ  ಅವಾಕ್ಕಾಗಿ ಹೋಗಿದ್ದ......ನನಗೆ ಕೋಪ ಎಷ್ಟು ಬಂದಿತ್ತು ಎಂದರೆ ಆತನನ್ನು ಸೀಟಿನಿಂದ ಎಳೆದು ಕೆನ್ನೆಗೆ ಮತ್ತೆರಡು ಕೊಟ್ಟುಬಿಟ್ಟೆ. ಅಷ್ಟರಲ್ಲಿ ಉಳಿದವರೆಲ್ಲರೂ 'ಜಾನೇ ದೋ ಜಾನೇ ದೋ' (ಹೋಗಲಿ ಬಿಡಿ, ಹೋಗಲಿ ಬಿಡಿ )   ಎಂದು ನನ್ನ ಬಿಗಿಮುಷ್ಟಿಯಿಂದ ಆ ಯುವಕನನ್ನು ಬಿಡಿಸುವ ಪ್ರಯತ್ನ ಮಾಡುತಿದ್ದರು. ಅಷ್ಟರಲ್ಲಿ ನನ್ನ ಕೋಪವು ತಣ್ಣಗಾಗಿತ್ತು. ಆ ವಯಸ್ಸಾದ ವ್ಯಕ್ತಿಯನ್ನು ಅಲ್ಲಿ ಕೂರಿಸಿ ನಾನು ನನ್ನ ಪೇಪರ್ ನತ್ತ ಕಣ್ಣು ಹಾಯಿಸತೊಡಗಿದೆ.  ನನ್ನ ಪಕ್ಕದಲ್ಲೇ ನಿಂತಿದ್ದ ಆ ಯುವಕ  ನಾನು ಓದುತಿದ್ದ ಪತ್ರಿಕೆಯನ್ನು ನೋಡಿ (ಅದು 'ಕನ್ನಡ' ಎಂದು ಅರ್ಥೈಸಿ ಕೊಂಡಿರಬೇಕು)  'ಕಿಧರ್ ಕಿಧರ್ ಸೆ ಇಧರ್ ಆಕೆ ದಾದಾಗಿರಿ ಕರ್ತೆ ಹೈ ,ಸಬಕೋ ಭಗಾನ ಚಾಹಿಯೇ   (ಎಲ್ಲೆಲ್ಲಿಂದೋ ಇಲ್ಲಿ ಬಂದು ದಾದಾಗಿರಿ ಮಾಡ್ತಾರೆ, ಎಲ್ಲರನ್ನೂ ಓಡಿಸಬೇಕು)  ಎಂದ.  ನಾನು 'ದೇಖೋ ದಾದಾಗಿರಿ ಮೈ ನಹಿ ಕರ್ ರಹನ್ ಹ್ಞೂ, ತುಂ ಹೀ ಕರ್ ರಹೇ ಹೊ'  (ದಾದಾಗಿರಿ ನಾನು ಮಾಡ್ತಾ ಇಲ್ಲ, ನೀನೆ ಮಾಡ್ತಾ ಇದ್ದೀಯ) ಎಂದಷ್ಟೇ ಹೇಳಿ ಪೇಪರ್ ಓದುವುದನ್ನು ಮುಂದುವರಿಸಿದೆ.  ಮಹಾರಾಷ್ಟ್ರ ಮತ್ತು ಕರ್ನಾಟಕ ದ ಗಡಿ ವಿವಾದ ತಾರಕಕ್ಕೇರಿದ ಸಮಯವದು.  ಆ ಯುವಕ 'ಮರಾಠಿ' ಗ ನಾಗಿದ್ದು ತನ್ನ ಭಾಷೆಯಲ್ಲೇ ಈ ವಿಷಯದ ಬಗ್ಗೆ ಗೊಣಗಾಡುತಿದ್ದ. ಸೌತ್ ನಿಂದ, ನಾರ್ತ್ ನಿಂದ ಎಲ್ಲಾ ಇಲ್ಲಿಗೆ ಬಂದು ನಮ್ ಮೇಲೆ ದಾದಾಗಿರಿ ಮಾಡ್ತಾರೆ .ಬೆಳಗಾಂ ನಲ್ಲಿ ನಮ್ ಜನಕ್ಕೆ ಹಿಂಸೆ ಕೊಡ್ತಾ ಇದ್ದಾರೆ ..ಹೀಗೆ ಏನೇನೋ ಹೇಳ್ತಾ ಇದ್ದ....ಆತನು 'ಮರಾಠಿ' ವ್ಯಕ್ತಿ ಎಂದು ತಿಳಿದ ಉಳಿದವರು ಅವನ ಬಗ್ಗೆ ಸೌಮ್ಯ ಭಾವನೆ ತಳೆದು ಅವನ ಮಾತಿಗೆ ಹೌದು ಹೌದು ಎಂಬಂತೆ ತಲೆ ಆಡಿಸಲು ಪ್ರಾರಂಭಿಸಿದರು. ನೋಡು-  ನೋಡುತಿದ್ದಂತೆ ಅಲ್ಲಿದ್ದ ಎಲ್ಲರೂ ನನ್ನನ್ನು  'ವಿಲನ್' ತರ ನೋಡಲು ಶುರು ಮಾಡಿದರು. (ನಾನು ಅಲ್ಲಿಯವರೆಗೆ  'ಹೀರೋ ' ಆಗಿರಲಿಲ್ಲ ಎಂಬ ಪ್ರಶ್ನೆ ಬೇರೆ ) . ನಾನು ಹಿಡಿದಿದ್ದ 'ಕನ್ನಡ' ಪತ್ರಿಕೆ ಎಲ್ಲರ ಕಣ್ಣಿಗೂ ಪತ್ರಿಕೆಯಾಗಿ ಕಾಣದೆ  ವೈರಿ ಹಿಡಿದಿರುವ 'ಅಸ್ತ್ರ' ದ ತರ ಕಾಣಿಸುತ್ತಿತ್ತು. ಅವರೆಲ್ಲಾ ಅದನ್ನು ನೋಡುವ ದೃಷ್ಟಿಯೇ ಬದಲಾಗಿ ಹೋಗಿತ್ತು. ಪರಿಸ್ಥಿತಿ ತನಗೆ ಅನುಕೂಲವಾಗುತ್ತಿದೆ ಎಂಬುದನ್ನು ಗ್ರಹಿಸಿದ ಯುವಕ  ಮತ್ತೆ ನನ್ನನ್ನು ಕುರಿತು ಮಾತನಾಡಲಾರಂಭಿಸಿದ.   'ಆಪ್ ಲೋಗ್ ಕೋ ಹಮ್ ಲೋಗೋ ನೇ ಜ್ಯಾದ ಹಿ ಛೂಟ್ ದೆ ಕೆ ರಖಾ ಹೈ..ಇಸ್ಲಿಯೇ ತುಂ ಲೋಗ್ ಉಡಿ ಮಾರ್ ರಹ ಹೈ....ಪೆಹೇಲೆ ಸೆ ನಾಕ್ ದಬಾಕೆ ರಖತಾ ತೊ ಇತ್ನಾ ಹಿಮ್ಮತ್ ನಹಿ ಹೋತಿ ತುಂ ಲೋಗೊನ್ ಕೋ'   [ನಿಮಗೆಲ್ಲಾ ನಾವು ಸಲಿಗೆ ಕೊಟ್ಟಿದ್ದು ಜಾಸ್ತಿ ಆಯಿತು...ಅದ್ಕೆ ನೀವೆಲ್ಲ ಜಾಸ್ತಿ ಹಾರಾಡ್ತಾ  ಇದ್ದೀರಾ, ಮೊದಲೇ ಮೂಗು ಒತ್ತಿ ಬಿಟ್ಟಿದ್ರೆ ಇಷ್ಟು ಧೈರ್ಯ ಬರ್ತಾ ಇರ್ಲಿಲ್ಲ ನಿಮಗೆ]  ಎಂದ. ನಾನು ಜಾಸ್ತಿ ಏನು ಹೇಳೋಕೆ ಹೋಗಲಿಲ್ಲ . ಗಲ್ತಿ ತುಮಾರ ತಾ ಇಸ್ಲಿಯೇ ಮಾರ್ ಖಾಯ...ಅವ್ರ್ ಜ್ಯಾದ ಬೋಲೇಗಾ ಅವ್ರ್ ಖಾಯೇಗಾ [ ತಪ್ಪು ನಿನ್ನದಿತ್ತು. ಅದಕ್ಕೆ ಪೆಟ್ಟು ತಿಂದೆ...ಮತ್ತೆ ಜಾಸ್ತಿ ಮಾತಡಿದ್ರೆ ಮತ್ತೆ ತಿಂತೀಯ] ಅಂದೆ. ಅಷ್ಟರಲ್ಲಿ ನಾನು ಇಳಿಯೋ ನಿಲ್ದಾಣ ಬಂದು ಬಿಟ್ಟಿತ್ತು. ಅವನು ಇನ್ನೇನೋ ಬಡಬಡಿಸುತಿದ್ದ.  ಉಳಿದವರೆಲ್ಲರೂ ಹೌದು ಹೌದು ಎಂಬಂತೆ ತಲೆ ಆಡಿಸುತಿದ್ದರು.  ಆದರೆ ಇಷ್ಟೆಲ್ಲಾ ವಾದ ಯಾರಿಗಾಗಿ ನಾನು ಮಾಡುತಿದ್ದೆನೋ ಆ ವಯಸ್ಸಾದ ವ್ಯಕ್ತಿ ಕೂಡ 'ಮರಾಠಿ'  ಗ ರಾಗಿದ್ದು  ಸೌಜನ್ಯಕ್ಕಾದರೂ   ಒಂದು 'ಥ್ಯಾಂಕ್ಸ್' ಅಂತ ಹೇಳಲಿಲ್ಲ, ಮುಗುಳ್ನಗಲಿಲ್ಲ......ಅಷ್ಟೇ ಆಗಿದ್ದರೆ ನನಗೆ ಬೇಸರವಾಗುತ್ತಿರಲಿಲ್ಲ...... ಆ ಯುವಕ ಹೊರರಾಜ್ಯ ದವರ ಬಗ್ಗೆ ಮಾತನಾಡುತಿದ್ದಾಗ, ಅವರಿಗೆ ಬಯ್ಯುತಿದ್ದಾಗ ಅವನು ಹೇಳಿದ್ದು ಸರಿ ಎನ್ನುವಂತೆ ತಲೆ ಆಡಿಸಿದ್ದು ಮಾತ್ರವಲ್ಲ 'ಯೇ ಲೋಗ್ ಕೋ ಚರ್ಬಿ ಜ್ಯಾದ   ಹೋ ಗಯಾ ಹೈ' [ ಈ ಜನರಿಗೆ ಸೊಕ್ಕು ಜಾಸ್ತಿ ಆಗಿದೆ] ಎಂದು ಹೇಳಿದ್ದು ನನಗೆ ಆಶ್ಚರ್ಯವನ್ನುಂಟು ಮಾಡಿತ್ತು.   ನಾನು ಆ ವಯಸ್ಸಾದ ವ್ಯಕ್ತಿಯ ಮುಖವನ್ನೊಮ್ಮೆ ಗಂಭೀರನಾಗಿ ನೋಡಿ  ರೈಲಿನ ದ್ವಾರದೆಡೆಗೆ ಮುನ್ನೆಡೆದೆ.