Friday, May 21, 2010

ನೆನಪಾಗುತಿವೆ ಗೆಳತಿ ಆ ದಿನಗಳು

 


ನೆನಪಾಗುತಿವೆ ಗೆಳತಿ ಆ ದಿನಗಳು
ನಿನ್ನೊಡನೆ ನಾ ಕಳೆದ ಆ ಕ್ಷಣಗಳು
ಜೊತೆಯಲ್ಲಿ ಕಂಡ ಸವಿಗನಸುಗಳು
ನನಸಾಗದೆ ಹೋದ ಬರಿ ನೆನಪುಗಳು

ನನ್ನೆದೆಯ ತುಂಬಾ ಪ್ರೇಮಸುಧೆ ತುಂಬಿಸಿದೆ
ಸುತ್ತ ಮುತ್ತಲು ಮರೆತು ನೀ ನನ್ನ ಚುಂಬಿಸಿದೆ
ನಿನ್ನ ಪ್ರೇಮದಿ ಕೆಡೆದೆ, ಜೇನ ಹೊಳೆಯನೆ ಸುರಿದೆ
ಹೊತ್ತು ವೇಳೆಯ ಮರೆತೆ, ಭವದ ಚಿಂತೆಯ ತೊರೆದೆ


ನಿನ್ನೊಂದಿಗೆ ನಾ ಕಳೆದ ಆ ಮಧುರ ಕ್ಷಣಗಳು
ನನ್ನ ಬದುಕಲಿ ಸದಾ ಹೊಳೆಯುವ ನಕ್ಷತ್ರಗಳು
ನಿನ್ನ ಪ್ರೀತಿಯಲಿ ಮೈ ಮರೆತ ದಿನಗಳು
ನನ್ನ ಬದುಕಿನ ಹುಣ್ಣಿಮೆ ಯ ದಿನಗಳು


ಕದ್ದು ಕದ್ದು ನೋಡುತಿದ್ದ ಆ ನಿನ್ನ ಕಣ್ಣೋಟ
ನಕ್ಕಾಗ ದಂತ ಪಂಕ್ತಿಗಳ ಇಣುಕು ನೋಟ
ಮರೆಯಲಾಗುವುದೇ ಹೃದಯಗಳ ಒಡನಾಟ
ನೀ ನನ್ನ ಮರೆತೇ, ನಾ ಕಲಿತೆ ಪಾಠ .....


ನಿನ್ನ ಗೇಳಿನಲಿ ನನ್ನೇ ನಾ ಮರೆತಿದ್ದೆ
ನನ್ನಲ್ಲಿ ನಿನ್ನ ಬಿಂಬವ ನೋಡಿದ್ದೆ
ಮನದಲ್ಲಿ ಹೊಸ ಆಸೆಗಳ ಚಿಗುರಿಸಿದೆ
ನಿನ್ನದೇ ಕೈಯಾರೆ ಅವುಗಳ ಕಮರಿಸಿದೆ


ನೀ ಪಕ್ಕ ಕುಳಿತು ಆಡಿದ್ದ ಪಿಸುಮಾತು
ಎದೆಯೊಳಗೆ ಹೊಕ್ಕಿ ಉಸಿರಾಗಿ ಕೂತಿದೆ
ನಿನ್ನ ಅಗಲಿಕೆಯ ವಿರಹದ ನೋವು
ಜಂತುವಾಗಿ ಕಡಿದು ರಕ್ತ ಹೀರುತಿದೆ


ನಾ ಹೇಗೆ ಮರೆಯಲಿ ಆ ಕೊನೆಯ ದಿನವ
ನೀ ನಿಲ್ಲಿಸಿ ಹೊರಟಿದ್ದೆ ನನ್ನ ಎದೆ ಬಡಿತವ
ನೀ ಸರಿದು ಹೋದ ಎಷ್ಟೋ ತಾಸಿನವರೆಗೂ
ಶಿಲೆಯಾಗಿ ಕುಳಿತಿದ್ದೆ ದೂಷಿಸುತ ಹಣೆಬರಹವ.....

Sunday, May 9, 2010

ಅಮ್ಮ

ಅಮ್ಮನ ಬಗ್ಗೆ ಎಷ್ಟು ಬರೆದರೂ ಕಡಿಮೆ.....ಅಮ್ಮನ ದಿನವಾದ ಇಂದು ಅಮ್ಮನಿಗಾಗಿ ಈ ಕೆಲವು ಸಾಲುಗಳು...



ನವಮಾಸ ನಮ್ಮ ಭಾರವನು ಹೊತ್ತು
ಪ್ರಸವ ವೇದನೆ ಸಹಿಸಿ ಜನ್ಮವನು ಇತ್ತು
ಕೊಟ್ಟವಳು ನಮಗೆ ವಾತ್ಸಲ್ಯದ ಮುತ್ತು
ಬೆಳೆಸಿದಳು ಪ್ರೀತಿಯ ತುತ್ತನ್ನು ಇತ್ತು .


ಪದರ ಪದರವಾಗಿ ಮಾತು ಕಲಿಸಿದಳು
ಮೊದಲ ಗುರುವಾಗಿ ಪಾಠ ಕಲಿಸಿದಳು
ತನ್ನ ನೋವನು ಮರೆತು ಎದೆಹಾಲು ಕುಡಿಸಿದಳು
ಬೆಚ್ಚನೆ ಅಪ್ಪುಗೆಯಲಿ ಭಯವ ಮರೆಸಿದಳು


ತಪ್ಪು ಮಾಡಲು ನಾವು ಒಮ್ಮೊಮ್ಮೆ ಹೊಡೆಯುವಳು
ಮತ್ತೆ ಮನನೊಂದು ಮನದಲ್ಲೇ ಅಳುವವಳು
ಮಕ್ಕಳ ಸುಖಕಾಗಿ ಜೀವ ತೇದುವಳು
ತಾ ಗುಟುಕು ಸುಖದಲ್ಲೇ ತೃಪ್ತಿ ಹೊಂದುವಳು


ಕಣ್ಣಿಗೆ ಕಾಣುವ ಏಕೈಕ ದೇವತೆ ಇವಳು
ಹೋದ ಕಡೆಯಲ್ಲೆಲ್ಲಾ ಕೊಡುವಳು ನೆರಳು
ಜೋಗುಳವ ಹಾಡಿ ನಿದ್ದೆ ಬರಿಸುವಳು
ನೋವಿನ ಕಂತೆ ಕಂತೆ ಸಹಿಸುವಳು

ಏನು ಬರೆದರೂ ಕಡಿಮೆ ಅಮ್ಮನ ಬಗೆಗೆ
ಸರಿಸಾಟಿ ಯಾರಿಲ್ಲ ಜಗದಲ್ಲಿ ಇವಳಿಗೆ.
'ಅಮ್ಮ' ನು ದೇವರ ಅಮೂಲ್ಯವಾದ ಕೊಡುಗೆ
ತಿವಿಯದಿರಿ ಮಕ್ಕಳೇ ಹಾಲುಣಿಸಿದ ಎದೆಗೆ......

Happy Mother's Day........