ಜೀವನದಲ್ಲಿ ನಾವು ಅದೆಷ್ಟೋ ಕನಸುಗಳನ್ನು ಕಾಣುತ್ತೇವೆ. ಕಂಡ ಕನಸುಗಳೆಲ್ಲಾ ನನಸಾಗುವುದಿಲ್ಲ. ಕಾಲಕ್ಕೆ ತಕ್ಕಂತೆ ಕನಸುಗಳಲ್ಲೂ ಮಾರ್ಪಾಡಾಗುತ್ತವೆ. ನಾನು ಹೈಸ್ಕೂಲ್ ಹೋಗುತ್ತಿರುವಾಗ 'ವೈದ್ಯ' ನಾಗಬೇಕೆಂಬ ಕನಸು ಕಂಡವ. ಆದರೆ ಅದು ನನಸಾಗಲಿಲ್ಲ. ಹಾಗೇಯೇ ಕಂಡ ಇನ್ನು ಕೆಲವು ಕನಸುಗಳಲ್ಲಿ ಒಂದು ಕನಸು ಈಗ ನನಸಾಗುತ್ತಿದೆ....ಅದೇ ಸಂತೋಷದಲ್ಲಿ ಮನಸ್ಸಿಗೆ ಬಂದ ಕೆಲವು ಸಾಲುಗಳನ್ನು ನಿಮ್ಮ ಮುಂದಿಡುತಿದ್ದೇನೆ..........
![]() |
ಚಿತ್ರ ಕೃಪೆ - ಅಂತರ್ಜಾಲ |
ಜೀವನದಿ ಕಂಡೆ ಕನಸು ಹತ್ತು ಹಲವನು
ಅದರಲ್ಲೊಂದ ಬೆನ್ನ ಹತ್ತಿ ಮುಂದೆ ನಡೆದೆನು
ದಾರಿ ಮಧ್ಯೆ ಸಾವಿರಾರು ತೊಡಕು ಕಂಡೆನು
ಬಾಂಧವ್ಯಗಳ ನಡುವಿನಲ್ಲೂ ಒಡಕು ಕಂಡೆನು
ಎಷ್ಟೋ ವ್ಯರ್ಥ ಯತ್ನಗಳು ನಿರಾಸೆ ತಂದವು
ಪ್ರಶ್ನೆ ಮೇಲೆ ಪ್ರಶ್ನೆಗಳೇ ಮೂಡಿ ಬಂದವು
ಹೃದಯದೊಳಗೆ ವೇದನೆಯು ಮನೆಯ ಮಾಡಲು
ಮನಸು ಹೇಳುತಿತ್ತು ಮರಳಿ ಯತ್ನ ಮಾಡಲು
ಜೀವನದ ಕಟು ಸತ್ಯಗಳು ಅರ್ಥವಾದರೂ
ಇಷ್ಟರಲ್ಲೇ ತುಂಬಾ ಸಮಯ ವ್ಯರ್ಥವಾಯಿತು
ಬಂಧುಗಳ ಅಸಹಕಾರ ಸ್ಪಷ್ಟವಾದರೂ
ಮುನ್ನುಗ್ಗೋ ಆಸೆ ಮನಸ್ಸಿನಲ್ಲಿ ದಟ್ಟವಾಯಿತು
ದೇಹಕ್ಕೀಗ ಒಂದು ಹೊಸ ಹುರುಪು ಬಂದಿದೆ
ಮಾಸಿ ಹೋದ ಕಣ್ಣುಗಳಲೂ ಹೊಳಪು ಕಂಡಿದೆ
ಕೃಶ ದೇಹದಲ್ಲೂ ಈಗ ಕಸುವು ಮೂಡಿದೆ
ಮರಳಿ ಮಾಡಿದ ಯತ್ನವು ಯಶವ ತಂದಿದೆ
ಮನಸ್ಸಿನಾಳದಲ್ಲಿ ಮತ್ತೆ ಆಸೆ ಮೂಡಿದೆ
ಕನಸು ನನಸಾಗುವಂತೆ ಭಾಸವಾಗಿದೆ
ಮುದುಡಿ ಹೋದ ಸುಮವು ಈಗ ಅರಳತೊಡಗಿದೆ
ಗಡ್ದೆಯಾದ ಹಿಮವು ಕೂಡ ಕರಗತೊಡಗಿದೆ....