Tuesday, January 3, 2012

ಮಾಡ್ಬೇಡ ಅನ್ನೋದನ್ನು ಮಾಡೊವಲ್ಲಿ ಖುಷಿ ಜಾಸ್ತಿನಾ ???ಚಮಚೆಯನ್ನೋ, ಚೂರಿಯನ್ನೋ ಅಥವಾ ಇನ್ನೇನಾದ್ರು ಕೈಗೆ ಸಿಕ್ಕಿದ್ದನ್ನು ತೆಗೆದುಕೊಂಡು ಗೋಡೆಯ ಪೇಯಿಂಟ್ ತೆಗೆಯೋದು, ಒಳಗೆ ಇರೋ ಸಿಮೆಂಟು ಕಾಣಿಸೋ ವರೆಗೆ ಕೆರೆಯುತ್ತಾ ಹೋಗೋದು ನನ್ನ ಮೂರು ವರ್ಷದ ಮಗಳು 'ಕುಶಿ' ಮಾಡುವ ಅತೀ ಮುಖ್ಯ ದಿನಚರಿಗಳಲ್ಲಿ ಒಂದು. ಹಾಲ್ ಮತ್ತೆ ಅಡಿಗೆ ಮನೆಯ ಕೋಣೆಗಳು ಈವಾಗಲೇ ಆಕೆಯ ಈ ಕುಶಲ ಕಲೆಗಳಿಂದ ಅರೆ ನಗ್ನವಾಗಿದ್ದರೆ ಬೆಡ್ ರೂಂ ನ ಕೋಣೆಗಳು ಮಾತ್ರ ನಮ್ಮನ್ನು ಮುಟ್ಟೋರು ಯಾರು ಇಲ್ಲವೆಂದು ನಿರಾಳವಾಗಿದ್ದವು. ಬೆಡ್ ರೂಂ ನ ಕೋಣೆಗಳ ನಿರಾಳತೆಗೆ ಭಂಗ ಬರುವಂತೆ ಮೊನ್ನೆ ನಾನು ನನ್ನ ಮಗಳನ್ನು ಕುರಿತು 'ಚಿನ್ನು, ಈ ಗೋಡೆ ನ ಮುಟ್ಟೋಕೆ ಹೋಗಬೇಡ, ಅದರೊಳಗೆ 'ರಾ ಒನ್' ಇದ್ದಾನೆ ಅಂತ ಹೇಳಿದೆ....'ರಾ ಒನ್ ' ಸಿನೆಮಾ ನೋಡಲು ನಮ್ಮ ಪುಟಾಣಿ ಕುಶಿ ನ ಟಾಕೀಸ್ ಗೆ ಕರ್ಕೊಂಡು ಹೋಗಿದ್ದಾಗ ಸಿನೆಮಾ ಹಾಲ್ ನಲ್ಲಿ ಗಟ್ಟಿಯಾಗಿ ಬರುವ ಶಬ್ಧ ಹಾಗೂ ಸಿನೆಮಾದ ದೃಶ್ಯ ಗಳಲ್ಲಿನ ಭೀಕರತೆ ಗೆ ಆಕೆ ಹೆದರಿಕೊಂಡಿದ್ದು ನಾವು ಅರ್ಧ ದಲ್ಲೇ ಸಿನೆಮಾ ಮುಗಿಸಿ ಬರುವಂತೆ ಮಾಡಿತ್ತು. ಅಲ್ಲಿಂದ ಮುಂದೆ ಅವಳಿಗೆ ಊಟ ಮಾಡಿಸುವಾಗ, ಹಾಲು ಕುಡಿಸುವಾಗ , ತಿನ್ನು/ ಕುಡಿ ಇಲ್ಲಾ ಅಂದ್ರೆ ರಾ ಒನ್ ಬರ್ತಾನೆ ಅಂತ ಹೆದರಿಸೋದು common ಆಗಿಬಿಟ್ಟಿತ್ತು. ಅದ್ಕೆ 'ಗೋಡೆನಲ್ಲೂ ರಾ-ಒನ್ ಇದ್ದಾನೆ ಅಂತ ಹೆದರಿಸಿದ್ದೆ. ಅಲ್ಲಿವರೆಗೆ ಆ ಗೋಡೆಗಳ ತಂಟೆಗೆ ಹೋಗದೆ ತನ್ನಷ್ಟಕ್ಕೆ ಆತ ಆಡಿಕೊಳ್ಳುತಿದ್ದ ನಮ್ಮ ಕಂದಮ್ಮನಿಗೆ ನಾನು ಹಾಗೆ ಬೆದರಿಸಿದ್ದು ಪ್ರೇರಣೆ ಕೊಡ ಬೇಕೇ??? ನಾನು ಮನೆಯಲ್ಲಿ ಇಲ್ಲದೆ ಇರೋ ಹೊತ್ತಿಗೆ, ಅಮ್ಮ ಅಡಿಗೆಮನೆಯಲ್ಲಿ ಗ್ಯಾಸ್ ಮುಂದೆ ತಲ್ಲೀನವಾಗಿರುವ ಸಮಯ ನೋಡಿಕೊಂಡು ತನ್ನ ಕೈ- ಚಳಕ ತೋರಿಸಲು ಶುರು ಹತ್ತಿಕೊಂಡಳು......ಗೋಡೆಯಲ್ಲಿ ೨-೩ ಕಡೆ ತೂತು ಮಾಡಿ ಅಡಿಗೆ ಮನೆಯೊಳಗಿರುವ ಇರುವ ಅಮ್ಮನನ್ನು ಕರೆದು ತನ್ನ ತೊದಲು ನುಡಿಗಳಲ್ಲಿ 'ಅಮ್ಮ ಅಮ್ಮ, ರಾ -ಒನ್ ಇಲ್ಲ ಇಲ್ಲಿ ,ನೋಡಮ್ಮ ' ಎನ್ನುವುದೇ !!!!! 

ಅಂದ್ರೆ ಮಕ್ಕಳು ಏನಾದ್ರೂ ಮಾಡ್ಬೇಡ ಅನ್ನೋದನ್ನು ಮಾಡೋದು ಜಾಸ್ತಿ .....ಅವ್ರಿಗೆ ಅದೊಂದು ಖುಷಿ.....ಏನು ಮಾಡುತಿದ್ದೀವಿ ಎನ್ನುವುದರ ಅರಿವು ಇಲ್ಲದ, ಮುಗ್ಧ ಮನಸ್ಸಿನ ಮಕ್ಕಳು ಹೀಗೆಲ್ಲಾ ಮಾಡೋದು ಅಪರಾಧವೇನೂ ಅಲ್ಲ ಬಿಡಿ......ಆದರೆ ದೊಡ್ಡವರಾದ ಮೇಲು ಅದನ್ನೇ ಮುಂದುವರಿಸಿದರೆ ಅದು ಖಂಡಿತಾ ಚೆನ್ನಾಗಿರೊಲ್ಲ ಅನ್ನುವುದು ನನ್ನ ಅಭಿಪ್ರಾಯ. 

ನಾವು ಸಮಾಜ ಜೀವಿಗಳು. ಒಬ್ಬರ ಹಿತಾಸಕ್ತಿಗಳು ಇನ್ನೊಬ್ಬರ ಹಿತಾಸಕ್ತಿಗಳಿಗೆ ಅಡ್ಡ ಬರುವ ಸಾಧ್ಯತೆ ಇದ್ದೇ ಇರುತ್ತದೆ. ಒಟ್ಟಿಗೆ ಬೆಳೆದು ಬಾಳುವಾಗ ನಮ್ಮ ನಮ್ಮಲ್ಲೇ ಘರ್ಷಣೆ ಆಗುವ ಸಂಭವಗಳು ಇವೆ. ಹೀಗೆ ನಮ್ಮ ನಮ್ಮಲ್ಲೇ ಆಗುವ ಘರ್ಷಣೆಗಳನ್ನು ತಡೆಯುವ ಸಲುವಾಗಿ ಸಮಾಜದಲ್ಲಿ ನಾವು ಕೆಲವು ಸೂತ್ರಗಳನ್ನು ರೂಪಿಸಿಕೊಂಡಿದ್ದೇವೆ. ಜನರು ಹದ್ದು ಮೀರಿ ವರ್ತಿಸದಂತೆ ಅಡೆತಡೆಗಳನ್ನು ಹಾಕಲಾಯಿತು. ಸಮಾಜವು ಬೆಳೆದಂತೆ, ಜನ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಂತೆ ಈ ಸೂತ್ರಗಳು ಸಾಲವು ಎನ್ನೋ ಅಭಿಪ್ರಾಯ ಮೂಡಿತು. ಆಗ ಸರಕಾರ ಮುಂದೆ ಬಂದು ಜನತೆಯ ಚಟುವಟಿಕೆಗಳಿಗೆ ಇತಿಮಿತಿಯನ್ನು ನಿರ್ಮಿಸಿತು. ಅಷ್ಟೇ ಅಲ್ಲದೆ ಈ ಇತಿಮಿತಿಗಳನ್ನು ಮೀರಿ ನಡೆದವರಿಗೆ ಶಿಕ್ಷೆಯನ್ನು ವಿಧಿಸಿತು.

ಮನುಷ್ಯನ ಸ್ವಭಾವ ವಿಚಿತ್ರವಾದುದು. ಸಮಾಜ ರೂಪಿಸಿದ ಸೂತ್ರಗಳನ್ನು ಮುರಿಯುವುದರಲ್ಲೇ ಸಂತೋಷ ಪಡುತ್ತಾನೆ. ಸರಕಾರದ ಗೆರೆಗಳನ್ನು ದಾಟಿ ಸುಖಿಸುತ್ತಾನೆ. ನಿಷೇಧಿಸಲಾದ ವಸ್ತುಗಳನ್ನೇ ಪಡೆಯಲು ಹಾತೊರೆಯುತ್ತಾನೆ. ಹೋಗ ಬಾರದು ಎನ್ನುವ ಮಾರ್ಗದಲ್ಲೇ ಹೋಗಲು ಇಷ್ಟ ಪಡುತ್ತಾನೆ. ಇದರಿಂದ ಅವನಿಗೂ ಕೇಡು, ನೆರೆಹೊರೆಯರಿಗೂ ಕೇಡು ಎಂಬುದನ್ನು ಮರೆತು ಬಿಡುತ್ತಾನೆ. 

ಕಳ್ಳತನ ,ಮೋಸ, ಹಿಂಸೆ ಮಾಡಬಾರದು, ಪರಸ್ತ್ರೀಯನ್ನು ಬಯಸಬಾರದು ಇವೆ ಮೊದಲಾದ ನಿಷೇಧಗಳನ್ನು ಎಲ್ಲಾ ಧರ್ಮಗಳೂ ಸಾರಿವೆ. ಆದರೆ ನಾವೆಲ್ಲಾ ಇದಕ್ಕೆ ವಿರುದ್ಧವಾಗಿಯೇ ನಡೆದುಕೊಳ್ಳುತ್ತೇವೆ. ನಮ್ಮ ಮನೆ ಹಿತ್ತಲಲ್ಲಿರುವುದಕ್ಕಿಂತ ಬೇರೆಯವರ ತೋಟದ ಹಣ್ಣು ಹಂಪಲುಗಳೇ ನಮ್ಮ ಬಾಯಿಗೆ ರುಚಿ ಎನಿಸುವುದು, ಸ್ವಂತ ಹೆಂಡತಿ ಎಷ್ಟೇ ರೂಪವತಿ ಆಗಿದ್ದರೂ ಪರರ ಹೆಂಡತಿಯೇ ಅತೀ ರೂಪಸಿಯಾಗಿ ಕಾಣಿಸುವಳು. ಒಲುಮೆಯಿಂದಲೋ, ಬಲುಮೆಯಿಂದಲೋ ಪರ ಸ್ತ್ರೀ ಸಂಗ ಮಾಡಿ ಮೈಮರೆಯುತ್ತೇವೆ. ಕೈಲಾಗದವರನ್ನು ಹಿಂಸಿಸಿ ಹರ್ಷಿಸುತ್ತೇವೆ. ಕುಡಿದು ವಾಹನಗಳನ್ನು ನಡೆಸುವುದು ಕಾನೂನು ಬಾಹಿರವೆಂದು ಗೊತ್ತಿದ್ದರೂ ಅದು ಒಂದು fashion ಅನ್ನೋ ತರ ಅದನ್ನೇ ಮಾಡಿ ಖುಷಿ ಪಡುತ್ತೇವೆ. ಟ್ರಾಫಿಕ್ ಸಿಗ್ನಲ್ ಗಳನ್ನು ಅಲಕ್ಷಿಸಿ, ಸಂಚಾರ ನಿಯಮಗಳನ್ನು ಮುರಿದು ಸಂತೋಷಪಡುತ್ತೇವೆ. ಬಸ್ಸುಗಳಲ್ಲಿ, ರೈಲುಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿ ನಾವೆಷ್ಟು ಬುದ್ದಿವಂತರು ಎಂದು ಗರ್ವಪಟ್ಟು ಕೊಳ್ಳುತ್ತೇವೆ. ಹೀಗೆ ಅದೆಷ್ಟೋ ಉದಾಹರಣೆಗಳನ್ನು ಕೊಡಬಹುದು.

ಇದನ್ನೆಲ್ಲಾ ಚಿಂತಿಸಿದಾಗ ಒಂದು ಅಂಶ ಸ್ಪಷ್ಟವಾಗುತ್ತದೆ. ನಿಷಿದ್ಧ ಕೆಲಸಗಳನ್ನು ಮಾಡುವಾಗ ಒಂದು ವಿಧವಾದ ವಿಲಕ್ಷಣ ಸಂತೋಷ ದೊರಕುತ್ತದೆ. ಯಾರು ಮಾಡದೇ ಇರುವ ಮಹಾನ್ ಕೆಲಸವನ್ನು ಮಾಡಿದ್ದೆವೆಂಬಾ ಹೆಮ್ಮೆ ಮೂಡುತ್ತದೆ. ಆದರೆ ಇದರಿಂದ ಬೇರೆಯವರಿಗೆ ಎಷ್ಟು ತೊಂದರೆಯಾಗುತ್ತದೆ ಎಂಬುದನ್ನು ನಾವು ಚಿಂತಿಸುವುದಿಲ್ಲ. ನಿಷಿದ್ಧವಾದ ಮಾರ್ಗವನ್ನು ಅನುಸರಿಸಿದಾಗ ನಾವು ಸ್ವಲ್ಪ ಕಾಲ ಸಂತೋಷವನ್ನು ಪಡೆಯಬಹುದು, ಅಥವಾ ಈ ಮಾರ್ಗ ಜಯಪ್ರದವೂ ಆಗಬಹುದು. ಆದರೆ ನಡೆಯುವವರೆಗೂ ನಾಣ್ಯ ಎಂಬುದನ್ನು ನಾವು ಮರೆಯಬಾರದು. ಒಂದು ಸಾರಿ ಮುಗ್ಗರಿಸಿದರೆ ಮೇಲೇಳುವುದು ತುಂಬಾ ಕಷ್ಟವಾಗುತ್ತದೆ. ಎದ್ದರೂ ಲೋಕದೆದುರಿಗೆ ತಲೆಯೆತ್ತಿ ನಡೆಯುವ ಧೈರ್ಯವಿಲ್ಲದಾಗಿರುತ್ತದೆ. ಜನತೆಯ ತಿರಸ್ಕಾರ, ಅಪಹಾಸ್ಯ, ಬಹಿಷ್ಕಾರ ಗಳಿಗೆ ತುತ್ತಾಗಬೇಕಾಗುತ್ತದೆ. ಇಂತಹ ಬಾಳನ್ನು ಬಾಳುವುದಕ್ಕಿನತ ಮೊದಲೇ ಈ ಬಗ್ಗೆ ಎಚ್ಚರವಹಿಸುವುದು ಉತ್ತಮವಲ್ಲವೇ ? 

ಮಾಡಬೇಡ ಅನ್ನೋದನ್ನು ಮಾಡುವುದು ಮೊದಲಿಗೆ ವಿಲಾಸಮಯವಾಗಿ ಕಂಡು ಬಂದರೂ ಮುಂದೆ ವಿಷಾದದಲ್ಲಿ ಕೊನೆಗೊಳ್ಳುತ್ತದೆ. !!!! ಹಾಗಾದರೆ ನಿಷಿದ್ಧ ವಸ್ತುಗಳನ್ನು ವಿಷವೆಂದು ತಿಳಿದು ಸಮಾಜದಲ್ಲಿ ಹಸನಾದ ಬಾಳನ್ನು ಬಾಳೋಣ ವೇ ?

43 comments:

vaishu said...

Bro so true ....ಕೆಲವು ಕೆಟ್ಟ ಅಬ್ಯಾಸಗಳು ರೂಡಿ ಆಗದಿರಲಿ ಅಂತ ಹೆಚ್ಚಾಗಿ ಮಾಡಬೇಡ ಅನ್ನುತ್ತಾರೆ .ಹೀಗೆ "ಬೇಡ" ಅನ್ನೋದರ ಬಗ್ಗೆ ಕುತುಹಲ ಜಾಸ್ತಿ ಆಗಿ ಮಾಡಿಯೇ ತೀರಬೇಕು ಅನ್ನಿಸಿವಸ್ಟು ಕಾಡಿ ಬಿಡುತ್ತೆ :P If a smoker wakes up and determines(self or by other's pressure)to quit smoking.....on tat particular day the cigarette wil be on his mind much more than it was ever! 'DONTs'are more tempting than 'DOs'...or perhaps they are highly temptin things hence they cum under category of 'DONTs':D Very nicely written:-)

P.S :- ನಮ್ಮ ಕುಶಿಯ ಕುಶಳಕಲೆಗಳು ಇನ್ನಸ್ಟು ಹೆಚ್ಚಾಗಲಿ ಅನ್ನೋದು ನನ್ನ ಆರೈಕೆ ..."Dhaag se kuch accha hota hain toh dhaag acche hain":P... ಮತ್ತೊಮ್ಮೆ ಗೋಡೆ paint ಮಾಡ್ಸಿದ್ರೆ ಆಯ್ತು :D heheh:D

ನೆನಪಿನ ದೋಣಿಯ ನಾವಿಕ.. said...

ಮಕ್ಕಳ ಆಟದ ಬಗ್ಗೆ ಹೇಳ್ತಾ ಹೇಳ್ತಾ ಸಮಾಜದ ಬಗ್ಗೆಯೂ ತಿಳಿಸಿದ್ದೀರಿ.. ನಿಜವಾಗಿಯೂ ಅರ್ಥಪೂರ್ಣ ಅಂಕಣ., ಮಕ್ಕಳು ಮಾಡುವುದಕ್ಕೆ ಅರ್ಥವಿದೆ, ಅವರಿಗೆ ಅದು ಕುಶಿ ಕೊಡುತ್ತೆ ಅನ್ನೋದು ಮಾತ್ರ ಅವರಿಗೆ ಗೊತ್ತಿರುತ್ತೆ, ಅದು ಬಿಟ್ಟರೆ ತಾವು ಮಾಡುವುದು ಒಳ್ಳೆಯದ ಕೆಟ್ಟದ್ದ., ಅನ್ನುವ ತಿಳುವಳಿಕೆ ಅವರಿಗೆ ಇರೋದಿಲ್ಲ.. ಹಾಗೆ ಒಬ್ಬ ಕಳ್ಳ ಕೂಡ ಕಳ್ಳತನ ಮಾಡೋದು ತನ್ನ ಒಳ್ಳೆಯದಕ್ಕೆ ಅಂತ ತಿಳಿದುಕೊಳ್ಳುತ್ತಾನೆ, ಅದರಿಂದ ಮತ್ತೊಬ್ಬರಿಗೆ ತೊಂದ್ರೆ ಆಗುತ್ತೆ ಅಂತ ತಿಳಿದಿದ್ದರೂ.... ಅದು ಅವನ ಕುಶಿ ಅನ್ನೋದಕ್ಕಿಂತ ವಿಕೃತ ಭಾವನೆ ಅಂತ ಹೇಳಬಹುದು.. ಅದೇನೇ ಇರಲಿ, ನೀವು ಈ ಒಂದು ವಿಷಯವಾಗಿ ಬರೆಯೋಕೆ ನಮ್ಮ ಪುಟ್ಟಿ ಕುಶಿ ತನ್ನ ಕೈಚಳಕ ತೋರಬೇಕಾಗಿ ಬಂತು, ಅಪ್ಪನ ಈ ಪ್ರಯತ್ನದಲ್ಲಿ ತನ್ನದೂ ಒಂದು ಪಾಲಿರಲಿ ಅಂತ ಇರಬೇಕು..:) ಆದರೆ ಕುಶಿಯ ಕೈಚಳಕದಿಂದ ಮೂಡಿ ಬಂದಿರುವ ಕುಶಲ ಕಲೆಗಳ ಒಂದು ಫೋಟೋ ತೆಗೆದು ಇಲ್ಲಿ ಹಾಕಿದರೆ ನಾವು ನೋಡಿ ಕುಶಿ ಪಡಬಹುದಿತ್ತು..:) "ರಾ ಒನ್" ಬಗ್ಗೆ ಹೆದರದೆ ಅವನನ್ನ ಹುಡುಕೋಕೆ ಹೋದ ಕುಶಿಯ ಧೈರ್ಯ ಕಂಡು ನಮಗೂ ಕುಶಿ ಆಗಿದೆ...:D

ashokkodlady said...

ವೈಶು......

ನನ್ನ ಬ್ಲಾಗ್ ಗೆ ಸ್ವಾಗತ.... ಮಾಡ್ಬೇಡಿ ಅಂತ ಹೇಳಿದ್ದನ್ನು ಮಾಡುವಲ್ಲಿ ಎಲ್ರಿಗೂ ಕುತೂಹಲ ಜಾಸ್ತಿ.....ಇದಕ್ಕೆ ನಾನು ಹೊರತಲ್ಲ....ಸಣ್ಣ ಮಕ್ಕಳು ಇದನ್ನೆಲ್ಲಾ ಮಾಡಿದ್ರೆ ನಮಗೆ ನೋಡೋಕೆ ಖುಷಿ ಆಗುತ್ತೆ.....ಆದರೆ ದೊಡ್ಡವರಾದ ಮೇಲೆ ಅದು ಅಪರಾಧ ಅನ್ಸುತ್ತೆ......ಸುಂದರ ಪ್ರತಿಕ್ರೀಯೆಗೆ ಧನ್ಯವಾದಗಳು....

ashokkodlady said...

ಜಗನ್,
ಈ ಬಗ್ಗೆ ಯಾವುದೋ ಒಂದು ಪುಸ್ತಕದಲ್ಲಿ ಹಿಂದೆ ಓದಿದ್ದೆ....ಆದರೆ ಅದನ್ನೆಲ್ಲಾ ನೆನಪು ಮಾಡಿಕೊಂಡು ಇಲ್ಲಿ ಬರೆಯೋಕೆ ನಮ್ 'ಕುಶಿ' ನೇ ಕಾರಣ.... ಓದಿ, ಇಷ್ಟಪಟ್ಟು ಉತ್ತಮ ಪ್ರತಿಕ್ರೀಯೆ ಕೊಟ್ಟಿದ್ದಕ್ಕೆ ಧನ್ಯವಾದಗಳು....

Pradeep Rao said...

ನಿಜ ನಿಜ.. ನಾನು ಬಹಳಷ್ಟು ಸಲ ಚಿಕ್ಕವನಿರಬೇಕಾದ್ರೆ ತಂದೆ ಮಾಡಬೇಡ ಅಂದಿದ್ದನ್ನ ಬೇಕಂತಲೇ ಮಾಡಿಯೇ ತೀರುತ್ತಿದ್ದೆ! ಕುಶಿಯ ಕುತೂಹಲ ಚೆನ್ನಾಗಿದೆ!

ವಿಚಲಿತ... said...

ಇಂತಹ ಗುಣಗಳು ಬೆಳೆಯುತ್ತಾ ಹೋದರೆ ಒಳ್ಳೆಯದು, ಮುಂದೆ ಎಲ್ಲವನ್ನು ಕೂಲಂಕುಶವಾಗಿ ಪರಿಶೀಲಿಸಿ ಉತ್ತಮವಾದುದನ್ನೇ ಆರಿಸಿಕೊಳ್ಳಲು ಇದು ಉಪಯೋಗವಾಗುತ್ತದೆ,ಉತ್ತಮ ಲೇಖನ

naveen said...

Anna thumba chennagide...kushi putti ge aata haduva vyasu aadli bidi kaala kramena avarige gothaguthe edella madbardu thappu antha..chikka makalu avara kalpaneli yen yeno madidru adu thumba chennagiruthe kelondu sala bejar aadaga makalla aata nodi marthive edu aage antha thikoli....kushi putti ge hedarisbedi pls..

ashokkodlady said...

ಹಾಯ್ ಪ್ರದೀಪ್,

ಹಹಹ....ನನಗೂ ಆ ಅಭ್ಯಾಸ ಇತ್ತು...ಚಿಕ್ಕವರಾಗಿರುವಾಗ ಇದೆಲ್ಲ ಸಾಮಾನ್ಯ ಅಲ್ವಾ ? ಪ್ರತಿಕ್ರೀಯೆಗೆ ಧನ್ಯವಾದಗಳು...

ashokkodlady said...

ವಿಚಲಿತ.....
ನಿಜ, ಪ್ರತಿಕ್ರೀಯೆಗೆ ಧನ್ಯವಾದಗಳು...

ashokkodlady said...

ನವೀನ್....

ಹೌದು...ಚಿಕ್ಕ ಮಕ್ಕಳು ಇದೆಲ್ಲಾ ಮಾಡುವುದು ಇದ್ದದ್ದೇ ಅಲ್ವಾ....ಕುಶಿನೂ ಅದಕು ಹೊರತಲ್ಲ ಬಿಡಿ...ಪ್ರತಿಕ್ರೀಯೆಗೆ ಧನ್ಯವಾದಗಳು.

sunaath said...

ಅಶೋಕರೆ,
ಕುಶಿಯ ಕುತೂಹಲಭರಿತ ದಿಟ್ಟತನವನ್ನು ಓದಿ ನನಗೂ ಖುಶಿಯಾಯಿತು. ಇನ್ನು ನಿಷಿದ್ಧ ಕೆಲಸವನ್ನು ಮಾಡುವದು ಮಾನವಸಹಜ. Adam ಮತ್ತು Eve ಹಾಗೆ ಮಾಡಿದ್ದರಿಂದಲೇ ಈದಿನ ನಾವೆಲ್ಲ ಇಲ್ಲಿರೋದು!

Manjunatha Kollegala said...

Nice article... ಗೋಡೆ ಕೆತ್ತದಿದ್ದರೆ ರಾ ಒನ್ ಬರ್ತಾನೆ ಅಂತ ಹೆದರಿಸಿ ಸರಿ ಹೋಗ್ತಾಳೆ :)

Badarinath Palavalli said...
This comment has been removed by the author.
Badarinath Palavalli said...

ಪ್ರೀತಿಯ ಅಶೋಕ್ ಸಾರ್,

ಮಕ್ಕಳು ದೇವರ ಪ್ರತಿರೂಪ ಅನ್ನುತ್ತಾರೆ.

ಮಕ್ಕಳ ಬಗ್ಗೆ ಏನೇ ಬರೆದರೂ ಅದನ್ನು ಖುಷಿಯಾಗಿ ಓದಿಕೊಳ್ಳುತ್ತೇನೆ.

ಮಕ್ಕಳ ಕಿತಾಪತಿಗಳನ್ನು ಕಂದಾಗಲೆಲ್ಲ ನನ್ನ ತುಂಟ ಬಾಲ್ಯವೇ ನೆನಪಾಗುತ್ತದೆ.

ಒಂದು ಉತ್ತಮ ಖುಷಿಕೊಡುವ ಲೇಖನ ಕೊಟ್ಟಿರಿ. ಧನ್ಯವಾದಗಳು.

ನನ್ನ ಬ್ಲಾಗಿಗೂ ನಿಮಗೆ ಸ್ವಾಗತ.

ashokkodlady said...

ಸುನಾಥ್ ಸರ್...
ನಿಜ ಸರ್ ....ನಿಷಿದ್ಧ ವಾದುದನ್ನು ಮಾಡುವುದು ಮಾನವ ಸಹಜ ಗುಣ....ಇದರಿಂದ ಅನಾಹುತ ಆಗುವುದಿಲ್ಲವೆಂದರೆ ಇಂತಹ ಗುಣದಿಂದ ತೊಂದರೆ ಏನು ಇಲ್ಲ....ಪ್ರತಿಕ್ರೀಯೆಗೆ ಧನ್ಯವಾದಗಳು...

ashokkodlady said...

ಮಂಜು ಸರ್.....

ಹಹಹ........ಇಂತಹ ಕೆಲವು ಪ್ರಯತ್ನಗಳನ್ನೂ ಸಹ ಮಾಡಿದ್ದೇನೆ......ಮೆಚ್ಚುಗೆಗೆ ಧನ್ಯವಾದಗಳು...

ashokkodlady said...

ಬದ್ರೀ ಸರ್,

ಅದಕ್ಕೆ ಅಲ್ಲವೇ ಹೇಳಿರುವುದು- '' ಕೂಸು ಇದ್ದ ಮನಿಗ ಬೀಸಣಿಗೆ ಯಾತಕ'' ಅಂತ.....ಮಕ್ಕಳು ಏನು ಮಾಡಿದರೂ ನೋಡಲು ಚಂದ....ಮೆಚ್ಚಿ,ಪ್ರತಿಕ್ರೀಯಿಸಿದ್ದಕ್ಕೆ ಧನ್ಯವಾದಗಳು...

ನನ್ನೊಳಗಿನ ಕನಸು.... said...

ಸುಮ್ಮನಿರಿ ಅವಳು ಮುಂದೆ ಸಿವಿಲ್ ಇಂಜಿನಿಯರ್ ಆಗುತ್ತಾಳೆ... ಈಗಿನ್ದನೆ ಪ್ರೋತ್ಸಾಹಿಸಿ ...ತುಂಬಾ ಚೆನ್ನಾಗಿದೆ ಕುಶಿಯ ಕಿಲಾಡಿ ,,,.

Sneha Shetty said...

Hi Ashu,

Nice article...Kushi engineer agtale bidu...haage dhairyavante....Madbeda annodannu madoke naanu yavagalu mundirteeni...ontara curiosity adu...hehe..nice article...

ashokkodlady said...

ಹಾಯ್ ವೆಂಕಿ ....

ನೋಡೋಣ ಮುಂದೆ ಏನಾಗ್ತಾಳೆ ಅಂತ.....ಪ್ರತಿಕ್ರೀಯೆಗೆ ಧನ್ಯವಾದಗಳು...

ashokkodlady said...

ಹಾಯ್ ಸ್ನೇಹಾ...

ಹೌದು....ಅವಳು ನಿನ್ ತರಾನೆ ಆಗಿದ್ದಾಳೆ....ಅವಳ ಕಿಲಾಡಿತನ ನೋಡ್ಬೇಕು ಅಂದ್ರೆ ಮನೆಗೆ ಬಾ....ಮೆಚ್ಚಿ ಪ್ರತಿಕ್ರೀಯಿಸಿದ್ದಕ್ಕೆ ಧನ್ಯವಾದಗಳು...

ಪ್ರಚಂಬಕ said...

ಖಂಡಿತ ಸರ್, ನಿಮ್ ಈ ಲೇಖನವನ್ನು ಓದುವಾಗ್ಲೆ ನಮ್ಮ ವಾಸ್ತವ ಸ್ಥಿತಿಯೇ ನೆನಪಾಗ್ತಿದೆ. ದಿನಾ ಬಸ್ಸಲ್ಲಿ ಕಾಲೇಜಿಗೆ ಹೋಗ್ತೇನೆ,ಬರ್ತೇನೆ. ಕಾಲೇಜಲ್ಲಿ ಮೊಬೈಲ್ ತರ್ಬಾರ್ದು ಎಂದು ನಿಯಮ ಇದ್ರೂ ಮೊಬೈಲ್ ಇಲ್ದೆ ಹೋಗೋಕೆ ಮನಸ್ಸೇ ಬರಲ್ಲ...! ಒಮ್ಮೊಮ್ಮೆ ಬೇಡಾ ಅಂತ ಮನೆಯಲ್ಲಿಟ್ಟೋದ್ರೆ ಅವತ್ತು ಏನಾದ್ರು ಒಂದು ಅರ್ಜೆಂಟ್ ಆ ಮೊಬೈಲ್ ನಿಂದ್ಲೇ ಆಗಿರ್ಬೇಕಾಗಿರುತ್ತೆ. ಕೊಂಡೋದ್ರು ಪರವಾಗಿಲ್ಲ ಆದ್ರೆ ಪದೇಪದೆ ಕ್ಲಾಸಲ್ಲಿ ಪಾಠ ಮಾಡೋ ಸಮಯದಲ್ಲಿ ಒಬ್ಬರ ಬೆನ್ನ ಹಿಂದೆ ಒಬ್ಬರು ಮೊಬೈಲ್ ಇಡ್ಕೊಂಡು ಚ್ಯಾಟಿಂಗ್ ಮಾಡೋದು ಮಾತ್ರ ಬೇಡ್ವಾಂತ ಕಾಣುತ್ತೆ... ಇದ್ರಲ್ಲಿ ಏನ್ ತಪ್ಪು ಏನ್ ಸತ್ಯ ಅಂತಾನೆ ಗೊತ್ತಾಗ್ತಿಲ್ಲ, ಆದ್ರೂ ಇಷ್ಟೊಂದು ಬ್ಲಾಗನ್ನು ಓದುತ್ತಿರೋದು, ಬರೀತಿರೋದು, ಬ್ಲಾಗ್ ಲೋಕಕ್ಕೆ ಪಾದಾರ್ಪಣೆ ಮಾಡಿದ್ದು, ನಿಮ್ಮನ್ನೆಲ್ಲಾ ಕಂಡಿದ್ದು ಕೇವಲ ಈ ಒಂದು ಮೊಬೈಲ್ನಿಂದಲೇ... ಹೀಗೆ ಕೆಲವೊಂದನ್ನು ಮಾಡೋದು ಬೇಡಾಂದ್ರೂ ಅದೇ ಮಾಡೋಹಾಗೆ ಹುಡುಕಿಕೊಂಡು ಬರುತ್ತೆ ಏನಂತಿರೀ ಸರ್...? ನಿಮ್ಮ ಲೇಖನಕ್ಕಾಗಿ ಧನ್ಯವಾದಗಳು

Shamita Shetty said...

ಹಾಯ್ ಅಶು...

ಚೆನ್ನಾಗಿದೆ ಲೇಖನ...ಇದೊಂದು ಮಾನವ ಸಹಜ ಗುಣ....ಹಾಗೆ ನಾವು ಮನುಷ್ಯರಿಗೆ ಯಾವುದೋ ಕೆಟ್ಟದ್ದು ಅನ್ನಿಸುತ್ತೋ ಅದನ್ನೇ ಮಾಡುವುದರಲ್ಲಿ ಖುಷಿ ಸಿಗುತ್ತೆ....'ಕುಶಿ' ಯ ಕಾರೋಬರಗಳನ್ನು ಕೇಳಿ ಖುಷಿ ಆಯಿತು.......ಬರೀತಾ ಇರು....

ಸೀತಾರಾಮ. ಕೆ. / SITARAM.K said...

ತುಂಬಾ ಉತ್ತಮ ಲೇಖನ. ಮಗುವಿನ ಒಂದು ಉದಾಹರಣೆಯೊಂದಿಗೆ ದೊಡ್ಡವರ ಕಟ್ಟುಪಾಡುಗಳ ಮುರಿವ ವಿಲಕ್ಷಣ ಪ್ರವೃತಿಯನ್ನು ಚೆನ್ನಾಗಿ ವಿಶ್ಲೇಷಿಸಿದ್ದಿರಾ...

nimmolagobba said...

ಒಳ್ಳೆಯ ಅರ್ಥ ಗರ್ಭಿತವಾಗಿ ಲೇಖನ ಬರೆದಿದ್ದೀರಿ. ಮಗು ಪಾಪ ಬಿಡಿ ಅದು ತನ್ನ ಸುತ್ತಾ ಕಾಣುವ ಅಚ್ಚರಿಯ ಪರಿಸರವನ್ನು ಅರ್ಥ ಮಾಡಿಕೊಳ್ಳಲು ನಿರಂತರ ಪ್ರಯತ್ನದಲ್ಲಿರುವಾಗ ನಿಮ್ಮ ಲೇಖನದಂತೆ ಆಗುತ್ತದೆ. ಆದರೆ ನಾವು ಇನ್ನೂ ಅಸಹಕಾರ ಚಳುವಳಿಯ ಬಳುವಳಿಯನ್ನು ನಮ್ಮ ಹಿರಿಯರಿಂದ ಅನುವಂಶಿಕವಾಗಿ ಪದೀಯುತ್ತಲೇ ಇರುತ್ತೇವೆ. ಯಾವುದನ್ನು ಮಾಡಬೇಡಿ ಅಂದರೂ ತಕ್ಷಣ ನಾವು ಅದನ್ನು ಮಾಡಿ ನಿಯಮ ಮುರಿದಬಗ್ಗೆ ಹೆಮ್ಮೆಪದುತ್ತೇವೆ. ಅದಕ್ಕೆ ಒಂದೇ ಉಪಾಯ ಚಂಡಿ ಕಥೆಯಂತೆ ಕೆಟ್ಟದ್ದನ್ನು ಮಾಡಬೇಡಿ ಎನ್ನುವ ಬದಲಾಗಿ ಕೆಟ್ಟದ್ದನ್ನು ಮಾಡಿ ಅಂತಾ ನಿಯಮ ಮಾಡಿದರೆ ಬಹುಷಃ ಅದರ ವಿರುದ್ಧ ಕ್ರಿಯೆಯನ್ನು ಮಾಡಿ ಸಮಾಜಕ್ಕೆ ಒಳ್ಳೆಯದು ಮಾಡುವ ಸಾಧ್ಯತೆಯನ್ನು ಒಮ್ಮೆ ಪ್ರಯತ್ನ್ಸಬಹುದು ಆಲ್ವಾ ??? ಒಳ್ಳೆಯ ಚಾಟಿ ಏಟಿನ ಲೇಖನಕ್ಕೆ ಧನ್ಯವಾದಗಳು.

ashokkodlady said...

@ ಪ್ರಚಂಬಕ...

ನನ್ನ ಬ್ಲಾಗ್ ಗೆ ಆದರದ ಸ್ವಾಗತ....

ನಿಮ್ಮ ವಯಸ್ಸಿನಲ್ಲಿ ಇದೆಲ್ಲ ಕಾಮನ್ ಬಿಡಿ.....ಬೇಡ ಅನ್ನೋದನ್ನು ಮಾಡಲು ಯಾವಗಲೂ ಕುತೂಹಲ ಜಾಸ್ತಿನೆ ಇರುತ್ತೆ....ಮೆಚ್ಚಿ ಪ್ರತಿಕ್ರೀಯಿಸಿದ್ದಕ್ಕೆ ಧನ್ಯವಾದಗಳು....ಹೀಗೆ ಬರ್ತಾ ಇರಿ...

ashokkodlady said...

@ಶಮಿ....

ಪ್ರತಿಕ್ರೀಯೆಗೆ ಧನ್ಯವಾದಗಳು....

ashokkodlady said...

@ ಸೀತಾರಾಮ್ ಸರ್...

ಮಕ್ಕಳು ಆರಿಯದೇ ಮಾಡ್ತಾರೆ....ಆದರೆ ದೊಡ್ಡವರು ಗೊತ್ತಿದ್ದೂ ಮಾಡಿ ತೊಂದರೆಗೆ ಸಿಕ್ಕಿ ಹಾಕಿ ಕೊಳ್ತಾರೆ.....ಲೇಖನವನ್ನು ಮೆಚ್ಚಿ ಪ್ರತಿಕ್ರೀಯಿಸಿದ್ದಕ್ಕೆ ಧನ್ಯವಾದಗಳು..

ashokkodlady said...

ಬಾಲು ಸರ್....

ಹ ಹ ಹ....ಹೌದು ಸರ್....ಚಂಡಿ ಕಥೆಯಂತೆ ಮಾಡಿ ನೋಡ್ಬೇಕು....ಯಾವುದನ್ನೂ ಮಾಡಬಾರದೋ ಅದನ್ನು ಮಾಡಿ ಅಂತ ಹೇಳ್ಬೇಕು.....ಲೇಖನವನ್ನು ಮೆಚ್ಚಿ, ಸುಂದರ ಪ್ರತಿಕ್ರೀಯೆ ನೀಡಿದ್ದಕ್ಕೆ ಧನ್ಯವಾದಗಳು...

ಕವಿ ನಾಗರಾಜ್ said...

ವಾಸ್ತವತೆಯ ಸಹಜ, ನಗ್ನ ಚಿತ್ರಣ ಮೂಡಿಸಿದ್ದೀರಿ. ದನ್ಯವಾದಗಳು, ಅಶೋಕರೇ.

Shreepathi Gogadige said...

ಬ್ಲಾಗ್ ಚೆನ್ನಾಗಿದೆ. ಆದರೆ ಸಂಪೂರ್ಣವಾಗಿ ತೆರೆದುಕೊಳ್ಳುವುದು ಸ್ವಲ್ಪ ನಿಧಾನ. ಬಹುಶಃ widget ಗಳು ಹೆಚ್ಚಾದುವು ಅನ್ನಿಸುತ್ತೆ. Feedjit, wibiya widget, Slideshow ಮುಂತಾದುವೆಲ್ಲ ಅನಗತ್ಯ ಇರಬಹುದು. ಉಳಿದಂತೆ ಬ್ಲಾಗ್ ಚೆನ್ನಾಗಿದೆ, ಮುಂದುವರಿಸಿ.

Raghav said...

ಮಕ್ಕಳೆಂದರೆ ಹೀಗೆ ಅಲ್ಲವೇ..? ತುಂಬಾ ಕ್ಯೂಟ್ ನಮ್ ಖುಷಿ..! ತುಂಬಾ ಚೆನ್ನಾಗಿ ಬರೆದಿದಿರಾ..!! ಎಷ್ಟ್ ಚೆನ್ನಾಗ್ ಅಂದ್ರೆ........ ನನಗೂ ಬೇಗಾ ಮಾಡುವೆ ಆಗಿ ಒಂದ್ ಹೆಣ್ಣ-ಮಗೂನ ಹೆತ್ತು ಅವಳ ಕುತೂಹಲವನ್ನ ಯಾವಾಗ್ ನೋಡ್ತೀನೋ... ಅಂತ ಅನಿಸೋಕ್ ಶುರು ಆಗ್ತಾ ಇದೆ..!! ;-)

ashokkodlady said...

@ ಕವಿ ಸರ್ ....

ಧನ್ಯವಾದಗಳು..

ashokkodlady said...

@ ಶ್ರೀಪತಿ ...

ನನ್ನ ಬ್ಲಾಗ್ ಗೆ ಸ್ವಾಗತ...ನಿಮ್ಮ ಅನಿಸಿಕೆಗೆ, ಮೆಚ್ಚುಗೆಗೆ ಧನ್ಯವಾದಗಳು...ಬ್ಲಾಗ್ ನಿಧಾನವಾಗಿ ತೆರೆದುಕೊಳ್ಳುವುದು ನನ್ನ ಗಮನಕ್ಕೆ ಬಂದಿರಲಿಲ್ಲ.... ಬಗ್ಗೆ ಪರೀಕ್ಷಿಸುತ್ತೇನೆ. ಹೀಗೆ ಬರ್ತಾ ಇರಿ....

ashokkodlady said...

@ ರಾಘವ್..

ಹಹಹ ...ಬೇಗ ಮದ್ವೆ ಆಗಿ.....ನಿಮ್ ಬ್ಲೋಗ್ನಲ್ಲ್ಲಿ ನಿಮ್ಮಮಗಳು/ಮಗನ ಬಗ್ಗೆ ಬರೀರಿ....ಬ್ಲಾಗ್ ಗೆ ಭೇಟಿಕೊಟ್ಟು ಸುಂದರ ಪ್ರತಿಕ್ರೀಯೆ ನೀಡಿದ್ದಕ್ಕೆ ಧನ್ಯವಾದಗಳು...

ಜಲನಯನ said...

ಖುಷಿ ಖುಷಿಯಾಗಿ ಏನು ಮಾಡಿದರೆ ನಿಮಗೆಲ್ಲಾ ಖುಷಿಯಾಗುತ್ತೋ ಅದನ್ನೇ ಖುಷಿಯಾಗಿ ಮಾಡಲು ಬಿಡಿ..ಖುಷಿ ಖುಷಿಯಾಗಿರೋದೇ ನಿಮಗೆ ಖುಷಿಅ ಅಲವಾ..??? ಅಶೋಕ್....ಹಹಹ ಮಕ್ಕಳು ಏನೇ ಮಾಡಿದ್ರೂ ಚಂದ...ಅನಂದಿಸಿ ಆ ಕ್ಷಣಗಳನ್ನು....

ಈಶ್ವರ ಪ್ರಸಾದ said...

ಲೇಖನ ಚೆನ್ನಾಗಿದೆ. ವಾಸ್ತವತೆಯ ಚಿತ್ರಣ ಸುಂದರವಾಗಿ ಮೂಡಿ ಬಂದಿದೆ.

ಗುಬ್ಬಚ್ಚಿ ಸತೀಶ್ said...

makkale hage sir, avarige sullu helabaradu, hedarisabaradu. sariyada vichara helabeku. nidhanavagi sari hoguttare. avalu ra one illa andaga avalige nivu sulu hellidira endu gottaguttade, idu tumba apayakari.

ಮೌನರಾಗ said...

ಒಳ್ಳೆಯ ಲೇಖನ ಸರ್..
ಮಗುವಿನ ಬಗ್ಗೆ ಹೇಳಹೇಳುತ್ತಲೇ ಸಮಾಜಮುಖಿ ಚಿಂತನೆ ನಡೆಸಿದ್ದಿರಿ... ಚೆನ್ನಾಗಿದೆ...

Ashok.V.Shetty, Kodlady said...

ಆಜಾದ್ ಸರ್,

ನಿಜ ಸರ್....ಮಕ್ಕಳು ಏನು ಮಾಡಿದ್ರು ಚಂದವಾಗಿ ಕಾಣ್ಸುತ್ತೆ....ಪ್ರತಿಕ್ರೀಯೆಗೆ ಧನ್ಯವಾದಗಳು...

Ashok.V.Shetty, Kodlady said...

ಈಶ್ವರ್ ಸರ್....

ನನ್ನ ಬ್ಲಾಗ್ ಗೆ ಸ್ವಾಗತ....ಪ್ಪತಿಕ್ರೀಯೆಗೆ ಧನ್ಯವಾದಗಳು....ಹೀಗೆ ಬರ್ತಾ ಇರಿ...

Ashok.V.Shetty, Kodlady said...

ಗುಬ್ಬಚ್ಚಿ ಸರ್....

ನನ್ನ ಬ್ಲಾಗ್ ಗೆ ಸ್ವಾಗತ....ಹೌದು ಸರ್...ಮಕ್ಕಳ ಹತ್ತಿರ ಸುಳ್ಳು ಹೇಳುವುದು ಸಹ ಅಪಾಯಕಾರಿ....ಸುಂದರ ಪ್ರತಿಕ್ರೀಯೆಗೆ ಧನ್ಯವಾದಗಳು....ಬರುತ್ತಾ ಇರಿ ಸರ್....

Ashok.V.Shetty, Kodlady said...

@ ಮೌನ ರಾಗ

ನನ್ನ ಬ್ಲಾಗ್ ಗೆ ಸ್ವಾಗತ.......ಸುಂದರ ಪ್ರತಿಕ್ರೀಯೆಗೆ ಧನ್ಯವಾದಗಳು.